ಕಮಿಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ.  
ಉಡುಪಿ

ಇತಿಹಾಸ ಪುಟ ಸೇರಿದ ಕಮಿಲ ಶಾಲೆ

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಸುಳ್ಯ ತಾಲೂಕಿನಲ್ಲಿ ಅಧಿಕೃತವಾಗಿ ಏಳು ಶಾಲೆಗಳ ಬಾಗಿಲು ಮುಚ್ಚಿದ್ದು ಅದರಲ್ಲಿ ಗುತ್ತಿಗಾರು ಗ್ರಾಪಂ ವ್ಯಾಪ್ತಿಯ ಎರಡು ಶಾಲೆಗಳಿದ್ದವು. ಈಗ ಇದೇ ಗ್ರಾಮದ ಕಮಿಲ ಶಾಲೆಯೂ ಬಾಗಿಲು ಮುಚ್ಚಿದೆ. ಶೈಕ್ಷಣಿಕ ವರ್ಷ ಆರಂಭಗೊಂಡು 30 ದಿನಗಳ ಬಳಿಕ ವಿದ್ಯಾರ್ಥಿಗಳ ಕೊರತೆಯಿಂದಾಗಿ ಕಮಿಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂದ್ ಆಗಿದೆ.
1961ರಲ್ಲಿ ಆರಂಭವಾಗಿ ಆರು ದಶಕ ಗ್ರಾಮೀಣ ಭಾಗದ ಸಹಸ್ರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದ ಕಮಿಲ ಶಾಲೆ ಇದೀಗ ಇತಿಹಾಸ ಪುಟ ಸೇರಿದೆ. ಶಾಲೆಗೆ 0.81 ಸೆಂಟ್ಸ್ ಸ್ವಂತ ಜಾಗವಿದೆ. ಶಾಲಾ ಕಟ್ಟಡ, ಉತ್ತಮ ವೇದಿಕೆ, ಶಾಲಾ ಮೈದಾನ, ಹತ್ತಿರದಲ್ಲೇ ಅಂಗನವಾಡಿಯೂ ಇದೆ. ಇಷ್ಟೆಲ್ಲ ಸೌಲಭ್ಯಗಳಿದ್ದರೂ ಶಾಲೆಗೆ ಮಕ್ಕಳ ಕೊರತೆಯಿದೆ. ಅಂಗನವಾಡಿಯಲ್ಲೂ ಹೆಚ್ಚು ಮಕ್ಕಳಿಲ್ಲ.

ಶಾಶ್ವತ ಶಿಕ್ಷಕರಿಲ್ಲ

ಈ ವರ್ಷ ಶಾಲೆ ಪುನರಾರಂಭಗೊಂಡ ನಂತರ ನಾಲ್ಕು ಮಕ್ಕಳು ಬರುತ್ತಿದ್ದರು. ಆದರೆ ಪೂರ್ಣಾವಧಿ ಶಿಕ್ಷಕರು ಇರಲಿಲ್ಲ ಬದಲಾಗಿ ತಾತ್ಕಲಿಕವಾಗಿ ನಡುಗಲ್ಲು ಶಾಲೆಯ ಶಿಕ್ಷಕರನ್ನು ಇಲ್ಲಿಗೆ ನಿಯೋಜಿಸಲಾಗಿತ್ತು. ಅವರಿಗೆ ಕಮಿಲ ಶಾಲೆಯನ್ನು ನೋಡಿಕೊಳ್ಳುವ ಜವಾಬ್ದಾರಿಯಷ್ಟೆ ಇತ್ತು. ಇದನ್ನವರು ಕೆಲ ವರ್ಷಗಳಿಂದ ಮಾಡುತ್ತಿದ್ದರು. ಈ ಶೈಕ್ಷಣಿಕ ವಷರ್ದ ಆರಂಭದಿಂದ ನಡುಗಲ್ಲು ಅಥವಾ ಗುತ್ತಿಗಾರು ಪಿ.ಎಂ.ಶ್ರೀ ಶಾಲೆಯಿಂದ ಶಿಕ್ಷಕರು ಬಂದು ಪಾಠ ಮಾಡುತ್ತಿದ್ದರು.

ದಿನಕ್ಕೊಬ್ಬರು ಶಿಕ್ಷಕರು

ಕಾಯಂ ಶಿಕ್ಷಕರಿಲ್ಲದೆ ದಿನಕ್ಕೊಬ್ಬರು ಶಿಕ್ಷಕರು ಪಾಠ ಮಾಡುತ್ತಿದ್ದರು. ದಿನಕ್ಕೊಬ್ಬರು ಪಾಠ ಮಾಡಿದರೆ ಮಕ್ಕಳ ಓದಿಗೆ ತೊಂದರೆಯಾಗುತ್ತದೆ ಎಂಬುದನ್ನು ತಿಳಿದ ಪಾಲಕರು ಮಕ್ಕಳನ್ನು ಈ ಶಾಲೆಗೆ ಕಳುಹಿಸಲು ನಿರುತ್ಸಾಹ ತೋರಿದ್ದಾರೆ. ಅತಿಥಿ ಶಿಕ್ಷಕರೊಬ್ಬರು ಒಂದು ದಿನ ಬಂದವರು ಮತ್ತೆ ಇಲ್ಲಿಗೆ ಬರಲೇ ಇಲ್ಲ. ಇದರಿಂದ ಬೇಸತ್ತ ಪಾಲಕರು ಇದ್ದ ಬೆರಳೆಣಿಯ ಮಕ್ಕಳನ್ನೂ ಬೇರೆ ಶಾಲೆಗೆ ಸೇರಿಸಿದ್ದರಿಂದ ಇಲ್ಲಿ ಮಕ್ಕಳೇ ಇಲ್ಲದೆ ಶಾಲೆ ಶಾಶ್ವತವಾಗಿ ಮುಚ್ಚಿದೆ. ಆರು ವರ್ಷಗಳಿಂದ ಇಲ್ಲಿಗೆ ಪೂರ್ಣಕಾಲಿಕ ಶಿಕ್ಷಕರನ್ನು ನೀಡದೆ ಬೇರೆ ಶಾಲೆ ಶಿಕ್ಷಕರನ್ನು ನಿಯೋಜಿಸಿ ಶಾಲೆ ನಡೆಸಲಾಗುತ್ತಿತ್ತು. ಹೀಗೆ ಶಿಕ್ಷಕರು ಇಲ್ಲದೇ ಮಕ್ಕಳೂ ಬಾರದೆ ವಿದ್ಯಾದೇಗುಲಕ್ಕೆ ಶಾಶ್ತತವಾಗಿ ಬೀಗ ಬಿದ್ದಿದೆ.

ಶಾಲೆಗೆ ದಿನಕ್ಕೊಬ್ಬರು ಶಿಕ್ಷಕರು ಬರುತ್ತಿದ್ದರು. ಎಲ್ಲ ಶಾಲೆಗಳಲ್ಲಿ ಪಾಠ ಆಗುತ್ತಿದ್ದರೆ, ನಮ್ಮ ಮಕ್ಕಳಿಗೆ ಚಟುವಟಿಕೆಯಷ್ಟೇ ಆಗುತ್ತಿತ್ತು. ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಬೇರೆ ಶಾಲೆಗೆ ಸೇರಿಸಿದ್ದೇವೆ.

— ಸುಭದ್ರ ಕಮಿಲ, ಮಕ್ಕಳ ಪಾಲಕರು

ಶಾಲೆಯಲ್ಲಿ ಸರಿಯಾಗಿ ಪಾಠ ನಡೆಯುತ್ತಿರಲಿಲ್ಲ. ಶಿಕ್ಷಕರು ಸರಿಯಾಗಿ ಬರುತ್ತಿರಲಿಲ್ಲ. ಮಕ್ಕಳೂ ಕಡಿಮೆ ಇದ್ದರು, ಆದ್ದರಿಂದ ಅನಿವಾರ್ಯವಾಗಿ ಬೇರೆ ಕಡೆ ಸೇರಿಸಬೇಕಾಯಿತು.

— ಜಯಲಕ್ಷ್ಮೀ ಕಮಿಲ, ಎಸ್‌ಡಿಎಂಸಿ ಅಧ್ಯಕ್ಷೆ