ಹೊಂಡ ಗುಂಡಿಗಳಿಂದ ಆವೃತವಾಗಿ ಹದಗೆಟ್ಟಿರುವ ಕೊಳಚಿಕಂಬಳ ರಸ್ತೆ.
ಇತಿಹಾಸ ಪ್ರಸಿದ್ಧ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಸಂಬಂಧಿಸಿದ ಶ್ರೀ ಜಾರಂದಾಯ ಧೂಮಾವತಿ ದೈವಸ್ಥಾನ ಸಹಿತ ಕಟ್ಟದಂಗಡಿಯಿಂದ ಕೊಳಚಿಕಂಬಳ ಹಾಗೂ ಪಡುಬೈಲು ಸಂಪರ್ಕ ಕಲ್ಪಿಸುವ ಮುಖ್ಯ ಒಳರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕಂಬಳ ಗದ್ದೆಯಂತಾಗಿ ಮಾರ್ಪಟ್ಟಿದೆ. ಇದರಿಂದ ಪಾದಚಾರಿಗಳು ಹಾಗೂ ವಾಹನ ಸವಾರರು ದಿನನಿತ್ಯ ಪರದಾಡುವಂತಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಮೂಲ್ಕಿ ಸರ್ಫಿಂಗ್ ಕೇಂದ್ರ, ಹಲವಾರು ಪ್ರಮುಖ ರೆಸಾರ್ಟ್‌ಗಳು ಹಾಗೂ ಹೋಂಸ್ಟೇಗಳನ್ನು ಒಳಗೊಂಡಿರುವ ಈ ಪ್ರದೇಶ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ. ಆದರೆ, ಮೂಲಸೌಕರ್ಯ ಕೊರತೆ, ಅದರಲ್ಲೂ ವಿಶೇಷವಾಗಿ ರಸ್ತೆ ಹಳೇ ನಿರ್ವಹಣೆಯಿಂದ ಸಂಪೂರ್ಣ ಹೊಂಡಗಳು ಉಂಟಾಗಿವೆ. ಮಳೆಗಾಲದಲ್ಲಿ ಈ ಗುಂಡಿಗಳು ನೀರಿನಿಂದಾವೃತವಾಗಿ ವಾಹನ ಸಂಚಾರಕ್ಕೆ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊಳಚಿಕಂಬಳ ಭಾಗದಲ್ಲಿ ನೂರಕ್ಕೂ ಅಧಿಕ ಮನೆಗಳಿದ್ದು, ಇಲ್ಲಿನ ನಿವಾಸಿಗಳು ಉದ್ಯೋಗಕ್ಕಾಗಿ ಮೂಲ್ಕಿ ಹಾಗೂ ಇತರೆ ದೂರದ ಪ್ರದೇಶಗಳಿಗೆ ತೆರಳಲು ಮತ್ತು ಶಾಲಾ ಮಕ್ಕಳು ಪ್ರತಿದಿನ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಸಸಿಹಿತ್ಲು ಮುಂಡಾ ಬೀಚ್, ಉಡುಪಿ ಜಿಲ್ಲೆಯ ಹೆಜಮಾಡಿ ಸಮೀಪದ ನಡಿಕುದ್ರು ಕಿರುಬಂದರು ಕಾಮಗಾರಿ ಪ್ರದೇಶಕ್ಕೂ ಹೊಂದಿಕೊಂಡಿರುವ ಈ ರಸ್ತೆಯಲ್ಲಿ, ಮಳೆಗಾಲದಲ್ಲಿ ನಡೆದುಕೊಂಡು ಹೋಗುವುದೂ ಕೂಡ ದುಸ್ತರವಾಗಿದೆ. ವಾಹನಗಳು ಸಂಚರಿಸುವಾಗ ಸಿಡಿಯುವ ಕೆಸರು ನೀರು ಪಾದಚಾರಿಗಳ ಮೇಲೆ ಎರಚಿಕೊಳ್ಳುತ್ತಿದ್ದು, ಕೂಡಲೇ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ಎಚ್ಚೆತ್ತು ರಸ್ತೆ ದುರಸ್ತಿಗೆ ಮುಂದಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯ
ನಂದಿನಿ ಮತ್ತು ಶಾಂಭವಿ ನದಿಗಳು ಸಂಗಮಗೊಂಡು ಅರಬ್ಬಿ ಸಮುದ್ರ ಸೇರುವ ಮುಖಜ ಭೂಮಿ (ಅಳಿವೆ ಪ್ರದೇಶ) ಇರುವ ಈ ಭಾಗದಲ್ಲಿ ಸಾಹಸ ಕ್ರೀಡೆಗಳಾದ ಸರ್ಫಿಂಗ್ ಹಾಗೂ ಕಯಾಕಿಂಗ್ ತರಬೇತಿಗಾಗಿ ದೇಶ-ವಿದೇಶಗಳಿಂದ ಗಣನೀಯ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇವರಲ್ಲಿ ಹಲವರು ತರಬೇತಿ ಅವಧಿಯ ಪೂರ್ತಿ ಇಲ್ಲೇ ವಾಸವಾಗಿರುತ್ತಾರೆ. ಪ್ರತಿದಿನ ಸಂಜೆ ಸೂರ್ಯಸ್ತದ ಸೊಬಗು ಸವಿಯಲು ಹಾಗೂ ಮೀನುಗಾರಿಕೆ ಚಟುವಟಿಕೆಗಳಿಗೆ ನೂರಾರು ಮಂದಿ ಇಲ್ಲಿಗೆ ಭೇಟಿ ನೀಡುತ್ತಾರಾದರೂ, ರಸ್ತೆಯ ಅವ್ಯವಸ್ಥೆಯಿಂದಾಗಿ ಪ್ರವಾಸಿಗರು ಮತ್ತು ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗುತ್ತಿದೆ. ಅಪಾರ ಪ್ರವಾಸೋದ್ಯಮ ಸಾಮರ್ಥ್ಯವಿದ್ದರೂ ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸಿದ್ಧ ಕ್ಷೇತ್ರಗಳು ಹಾಗೂ ಬಹಳಷ್ಟು ಜನ ವಾಸಿಸುವ ಪ್ರದೇಶದ ರಸ್ತೆ ಬಹಳ ಮುಖ್ಯವಾಗಿದ್ದು ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸುವುದು ಬಹಳ ಅಗತ್ಯ.
— ಪ್ರಕಾಶ್ ಸುವರ್ಣ, ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ಸೇವಾ ಸಮಿತಿ ಅಧ್ಯಕ್ಷ