ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿ. 
ಉಡುಪಿ

ಕಮಲಶಿಲೆ ಮೇಳ ತಿರುಗಾಟಕ್ಕೆ ಸಜ್ಜು

ಯಕ್ಷಋತುವಿನ ಆರಂಭದಲ್ಲಿ ಪ್ರಥಮ ಸೇವೆಯಾಟ ಹೆಗ್ಗಳಿಕೆ

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ

ಕಮಲಶಿಲೆ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿ ಅಮ್ಮನವರ ದೇವಳ ವತಿಯಿಂದ ತಿರುಗಾಟ ನಡೆಸುತ್ತಿರುವ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳ ನ.10ರಂದು ಶ್ರೀಕ್ಷೇತ್ರದಲ್ಲಿ ಶ್ರೀ ಗಣಪತಿ ಹೋಮ, ರಾತ್ರಿ ಗಣಪತಿ ದೇವರ ಪೂಜೆ, ಸೇವೆಯಾಟಯೊಂದಿಗೆ 2026-27ನೇ ಸಾಲಿನ ತಿರುಗಾಟಕ್ಕೆ ಸಜ್ಜುಗೊಂಡಿದೆ.

ಕಮಲಶಿಲೆ ಮೇಳವು ಯಕ್ಷಋತುವಿನಲ್ಲಿ ಪ್ರಥಮವಾಗಿ ತಿರುಗಾಟ ಆರಂಭಿಸುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. 2027ರ ಮೇ 30ರ ತನಕ 210 ಹರಕೆ ಬಯಲಾಟ ಪ್ರದರ್ಶನ ಸೇವೆ ನೀಡಲಿದೆ. ಇತ್ತೀಚಿನ ವರ್ಷಗಳಲ್ಲಿ ಕರಾವಳಿ, ಮಲೆನಾಡು ಗಡಿ ದಾಟಿ ರಾಜಧಾನಿ ಬೆಂಗಳೂರಿನಲ್ಲೂ ಯಕ್ಷಗಾನ ಹರಕೆ ಬಯಲಾಟ ನೀಡುವ ಮೂಲಕ ರಾಜ್ಯಾದ್ಯಂತ ಬೆಳಕಿನ ಸೇವೆ ನೀಡುತ್ತಿದೆ. ನ.10ರಂದು ಶ್ರೀಕ್ಷೇತ್ರದಲ್ಲಿ ಸೇವೆಯಾಟದೊಂದಿಗೆ 11ರಂದು ಮಲೆನಾಡಿನ ಶಿವಮೊಗ್ಗದಲ್ಲಿ ಸೇವೆಯಾಟದ ಬಳಿಕ 13ರಿಂದ 20ರ ತನಕ ಬೆಂಗಳೂರು ಹಾಗೂ ಸುತ್ತಮುತ್ತಲಿನಲ್ಲಿ ಯಕ್ಷಗಾನ ಹರಕೆ ಬಯಲಾಟಗಳು ನಡೆಯುತ್ತವೆ. 21ರಂದು ಮರಳಿ ಊರಿಗೆ ಬರಲಿದೆ.

ಮೇಳದ ಏಳಿಗೆಯಲ್ಲಿ ಆನುವಂಶಿಕ ಆಡಳಿತ ಧರ್ಮದರ್ಶಿ ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ, ಆನುವಂಶಿಕ ಧರ್ಮದರ್ಶಿ, ವ್ಯವಸ್ಥಾಪಕ ಆಜ್ರಿ ಚಂದ್ರಶೇಖರ ಶೆಟ್ಟಿಯವರ ಕೊಡುಗೆ, ಸಂಸ್ಥಾಪಕರ ಸೇವೆ ಅವಿಸ್ಮರಣೀಯ. ಆಜ್ರಿ, ಕೊಡ್ಲಾಡಿ, ಸಿದ್ದಾಪುರ, ಯಡಮೊಗೆ, ಹಳ್ಳಿಹೊಳೆ, ಕಮಲಶಿಲೆ, ಹೊಸಂಗಡಿ, ಗ್ರಾಮಸ್ಥರು, ಎಸ್.ಕೃಷ್ಣಮೂರ್ತಿ ಭಟ್ ಮತ್ತು ಸಹೋದರರು ಸಿದ್ದಾಪುರ, ಎಚ್.ನಾರಾಯಣ ಶೆಟ್ಟಿ ಜನ್ಸಾಲೆಯವರ ಸಹಕಾರವಿದೆ. ಮೇಳದ ಸಂಚಾಲಕರಾಗಿ ಸೌಡ ಗೋಪಾಲ ಮೇಳವನ್ನು ಮುನ್ನೆಡೆಸುತ್ತಿದ್ದಾರೆ. ಈ ಸಾಲಿನಲ್ಲಿ ಯಕ್ಷಗಾನ ಹರಕೆ ಬಯಲಾಟಗಳನ್ನು ಭಕ್ತರು ಸಂಪೂರ್ಣವಾಗಿ ಮುಂಗಡ ಕಾಯ್ದಿರಿಸಿಕೊಂಡಿದ್ದಾರೆ.

ಈ ಸಾಲಿನಲ್ಲಿ ಭಾಗವತರಾಗಿ ಮಧುಕರ ಹೆಗ್ಡೆ ಮಡಾಮಕ್ಕಿ, ಪವನ ಆಚಾರ್ಯ ಅರಸಮ್ಮಕಾನು ಶೇಡಿಮನೆ, ಸಂಗೀತ ಪ್ರಭಾಕರ ನಾಗೂರು, ಮದ್ದಳೆ ನಾಗರಾಜ ನಾಯ್ಕ ಯಡಮೊಗ್ಗೆ, ಲೋಹಿತ್ ತೆಕ್ಕಟ್ಟೆ, ಚೆಂಡೆ ಶ್ರೀನಿವಾಸ ಪ್ರಭು ಕೋಟ, ಅಜಿತ್ ಆಚಾರ್ ಕಾಲ್ತೋಡು, ಮುಮ್ಮೇಳದ ಸ್ತ್ರೀ ಪಾತ್ರದಲ್ಲಿ ಪಂಜು ಕುಮಾರ ಬಗ್ವಾಡಿ, ಕೃಷ್ಣ ಗಾಣಿಗ ಹೊಸಂಗಡಿ, ನಾಗರಾಜ ಪೂಜಾರಿ ದೇವಲ್ಕುಂದ, ಪ್ರಶಾಂತ ಕೋಟ, ಹಾಸ್ಯ ಕಲಾವಿದರಾಗಿ ವಿಶ್ವನಾಥ ನಾಯಕ್ ಕುಳ್ಳಂಬಳ್ಳಿ, ಪುರುಷ ವೇಷದಲ್ಲಿ ಸಂಜೀವ ಗಾಣಿಗ ಹೆರಂಜಾಲು, ಗೋಪಾಲ ಸೌಡ, ಸುನೀಲ್ ಹೊಲಾಡ್, ವಿಶ್ವನಾಥ ಹೆನ್ನಾಬೈಲು, ನಿತಿನ್ ಶೆಟ್ಟಿ ಸಿದ್ದಾಪುರ, ಉದಯ ಕೊಠಾರಿ ಚಕ್ರಮೈದಾನ, ಆಶಿಶ್ ಪೂಜಾರಿ ಪಾದೇಮಠ, ಗಣೇಶ ಗಡಿಕಟ್ಟೆ, ರತ್ನಾಕರ ಪೂಜಾರಿ ಶಾಡಬೇರು, ಮೇಘರಾಜ ಗುಮ್ಮೋಲ, ಅನ್ವಿತ್, ಸಂಜಯ ಬಟ್ಟೆಮಲ್ಲಪ್ಪ ಭಾಗಿಯಾಗಲಿದ್ದಾರೆ.

ದೇವಳದ ವತಿಯಿಂದ ನಡೆಸಲ್ಪಡುವ ಯಕ್ಷಗಾನ ಮೇಳದಿಂದ ಪಾವಿತ್ರೃಕ್ಕೆ ಆದ್ಯತೆ ನೀಡಲಾಗುತ್ತದೆ. ಕಲಾವಿದರು ಕಲೆಯನ್ನು ಗೌರವಿಸಿ ಗುರುತಿಸಿಕೊಳ್ಳಬೇಕು. ಯಕ್ಷಗಾನದ ಮೂಲಕ ಧಾರ್ಮಿಕ ಪ್ರಸಾರ ಕಾರ್ಯವಾಗಬೇಕು. ಭಕ್ತರು ಮುಂದಿನ ಸಾಲಿನ ಸೇವೆಯಾಟಗಳನ್ನು ಈಗಾಗಲೇ ಕಾಯ್ದಿರಿಸಲು ಅವಕಾಶವಿದೆ.
ಎಸ್.ಸಚ್ಚಿದಾನಂದ ಚಾತ್ರ, ಆನುವಂಶಿಕ ಆಡಳಿತ ಧರ್ಮದರ್ಶಿ