ಮಲ್ಪೆಯಲ್ಲಿ ಆಯೋಜಿಸಿದ್ದ ಕ್ರೈಸ್ತ ಐಕ್ಯತಾ ಪ್ರಾರ್ಥನಾ ಸಭೆಯನ್ನು ಕುಮಾರ್ ಸಾಲಿನ್ಸ್ ಉದ್ಘಾಟಿಸಿದರು. ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಪ್ರದೀಪ್ ಕಾರ್ಡೊಜಾ, ಡಾ.ರೋಕ್ ಡಿಸೋಜಾ, ಜೋನ್ ಫೆರ್ನಾಂಡಿಸ್, ವಿಲ್ಸನ್ ಡಿಸೋಜಾ, ಅಶ್ವಿನ್ ಆರಾನ್ಹಾ, ಜೋಕಿಮ್ ಡಿಸೋಜಾ, ಕಿಶೋರ್ ಇದ್ದರು.
* ಯುಬಿಎಂ ಚರ್ಚ್ನ ವಂ.ಕುಮಾರ್ ಸಾಲಿನ್ಸ್ ಆಶಯ
* ಕಲ್ಯಾಣಪುರ ವಲಯ ಕೆಸ್ತ ಐಕ್ಯತಾ ಪ್ರಾರ್ಥನಾ ಸಭೆ
ಉಡುಪಿ: ನಮ್ಮ ಸುತ್ತಲಿರುವ ಕತ್ತಲನ್ನು ಬೆಳಕು ಕರಗಿಸುವಂತೆ ಯೇಸು ಸ್ವಾಮಿಯು ಮರಣ ಜಯಿಸಿ ನಮಗೆ ಪುನರುತ್ಥಾನದ ಬೆಳಕು ನೀಡಿದ್ದಾರೆ. ಅಂತೆಯೇ ನಾವೆಲ್ಲರೂ ಕತ್ತಲು ತುಂಬಿದ ದುರ್ಬಲರ ಬದುಕಿನಲ್ಲಿ ಹಣತೆ ಹಚ್ಚಿದಾಗ ನಮ್ಮ ಜೀವನ ಸಾರ್ಥಕ್ಯ ಕಾಣುತ್ತದೆ. ದ್ವೇಷ, ಕತ್ತಲು ತುಂಬಿದ ಸಮಾಜದಲ್ಲಿ ಪ್ರೀತಿ, ಸಹಬಾಳ್ವೆ ಎಂಬ ಹಣತೆಯಿಂದ ಎಲ್ಲರ ಬಾಳಿನಲ್ಲಿ ಬೆಳಕು ಕಾಣುವುದು ಇಂದಿನ ಆದ್ಯತೆಯಾಗಬೇಕು ಎಂದು ಮಲ್ಪೆ ಯುಬಿಎಂ ಚರ್ಚ್ನ ವಂ.ಕುಮಾರ್ ಸಾಲಿನ್ಸ್ ಆಶಯ ವ್ಯಕ್ತಪಡಿಸಿದರು.
ಮಲ್ಪೆಯ ಸಿಎಸ್ಐ ಎಬನೇಜರ್ ಚರ್ಚ್ನಲ್ಲಿ ಗುರುವಾರ (ಜ.22) ಆಯೋಜಿಸಿದ್ದ ಕಲ್ಯಾಣಪುರ ವಲಯ ಹಂತದ ಕ್ರೈಸ್ತ ಐಕ್ಯತಾ ಪ್ರಾರ್ಥನಾ ಸಭೆಯಲ್ಲಿ ಪ್ರಬೋಧನೆ ನೀಡಿ ಮಾತನಾಡಿದರು.
ವಸ್ತುಗಳ ಮೇಲೆ ಬೇಡ ಪ್ರೀತಿ
ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ನ ಸಹಾಯಕ ಧರ್ಮಗುರು ವಂ.ಪ್ರದೀಪ್ ಕಾರ್ಡೊಜಾ ಮಾತನಾಡಿ, ಪರರನ್ನು ಪ್ರೀತಿಸದ ಮಾನವ ಹೃದಯ ಸ್ಮಶಾನಕ್ಕೆ ಸಮ ಎಂಬಂತೆ ನಾವು ವಸ್ತುಗಳನ್ನು ಪ್ರೀತಿಸುವ ಬದಲು ಮಾನವರನ್ನು ಪ್ರೀತಿಸಬೇಕು. ಪ್ರತಿಯೊಬ್ಬರೂ ಶಾಂತಿಯ ದೂತರಾಗಿ ಜಗತ್ತಿಗೆ ದಾರಿದೀಪವಾಗುವ ಕೆಲಸ ಮಾಡಬೇಕು. ಪರರ ನೋವಿಗೆ ದನಿಯಾದಾಗ ಅವರಲ್ಲಿ ಪರಮಾತ್ಮನನ್ನು ಕಾಣಲು ಸಾಧ್ಯ. ನಿರ್ಗತಿಕರು, ಅನಾಥರನ್ನು ಪ್ರೀತಿಸುವ ಮೂಲಕ ಯೇಸು ಸ್ವಾಮಿ ತೋರಿಸಿದ ದಾರಿಯಲ್ಲಿ ಸಾಗಬೇಕು ಎಂದರು.
ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಹಾಗೂ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ನ ಪ್ರಧಾನ ಧರ್ಮಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಪ್ರಾರ್ಥನಾ ಸಭೆಯ ನೇತೃತ್ವ ವಹಿಸಿದ್ದರು.
ವಂ.ಡಾ.ರೋಕ್ ಡಿಸೋಜಾ, ವಂ.ಜೋನ್ ಫೆರ್ನಾಂಡಿಸ್, ವಂ.ವಿಲ್ಸನ್ ಡಿಸೋಜಾ, ವಂ.ಅಶ್ವಿನ್ ಆರಾನ್ಹಾ, ವಂ.ಜೋಕಿಮ್ ಡಿಸೋಜಾ, ಸಿಎಸ್ಐ ಸಭೆಯ ಉಡುಪಿ ವಲಯ ಮುಖ್ಯಸ್ಥ ವಂ.ಕಿಶೋರ್, ವಂ.ಎಡ್ವಿನ್ ಸೋನ್ಸ್, ತೊಟ್ಟಂ ಚರ್ಚ್ನ ಪಾಲನಾ ಸಮಿತಿಯ ಲೆಸ್ಲಿ ಆರೋಜಾ, ಸಿಸ್ಟರ್ ಸುಶ್ಮಾ, ರೋಮನ್ ಕ್ಯಾಥೊಲಿಕ್, ಸಿಎಸ್ಐ ಸಹಿತ ವಿವಿಧ ಕ್ರೈಸ್ತ ಸಭೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಸಿಎಸ್ಐ ಎಬನೇಜರ್ ಚರ್ಚ್ ಮಲ್ಪೆಯ ಪಾಸ್ಟರ್ ವಂ.ವಿನಯ್ ಸಂದೇಶ್ ಸ್ವಾಗತಿಸಿದರು. ಲೂವಿಸ್ ಫೆರ್ನಾಂಡಿಸ್ ವಂದಿಸಿದರು. ತೊಟ್ಟಂ ಸಂತ ಅನ್ನಮ್ಮ ಚರ್ಚ್ನ ಧರ್ಮಗುರು ವಂ.ಡೆನಿಸ್ ಡೆಸಾ ಕಾರ್ಯಕ್ರಮ ನಿರೂಪಿಸಿದರು.