ಗೀತಾನಂದ ಫೌಂಡೇಶನ್ ಅಧ್ಯಕ್ಷ ಆನಂದ ಸಿ. ಕುಂದರ್ ಯಕ್ಷಶಿಕ್ಷಣ ಸನಿವಾಸ ಶಿಬಿರ ಉದ್ಘಾಟಿಸಿದರು.
ಉಡುಪಿ: ಯಕ್ಷಗಾನ ಕಲಾರಂಗವು ಸಾಂಸ್ಕತಿಕ, ಸಾಮಾಜಿಕ ಕಾರ್ಯಗಳಿಗೆ ಸಮರ್ಪಿಸಿಕೊಂಡಿದೆ. ಯಕ್ಷಗಾನ ಕಲೆ, ಕಲಾವಿದರ ಕ್ಷೇಮಚಿಂತನೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಮುಂತಾದ ಕೆಲಸ ಅಸಾಧಾರಣವಾದುದು. ಪರಿಶ್ರಮದ ದುಡಿಮೆ ಮತ್ತು ಪಾರದರ್ಶಕ ವ್ಯವಹಾರದಿಂದ ಈ ಸಂಸ್ಥೆ ಸಮಾಜದ ಮನ್ನಣೆಗೆ ಪಾತ್ರವಾಗಿದೆ ಎಂದು ಗೀತಾನಂದ ಫೌಂಡೇಶನ್ ಅಧ್ಯಕ್ಷ ಆನಂದ ಸಿ. ಕುಂದರ್ ಹೇಳಿದರು.
ಬುಧವಾರ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ವತಿಯಿಂದ ಭೀಮ ಗೋಲ್ಡ್ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಒಂದು ವಾರದ ಯಕ್ಷಶಿಕ್ಷಣ ಸನಿವಾಸ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಶಾಸಕ ಯಶ್ಪಾಲ್ ಎ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಅಭ್ಯಾಗತರಾಗಿ ಉದ್ಯಮಿ ಪಿ. ನಟರಾಜ ಹೆಗ್ಡೆ, ಸಾಮಾಜಿಕ ಕಾರ್ಯಕರ್ತ ಸುಧೀರ್ ಕುಮಾರ್ ಶೆಟ್ಟಿ, ಪಶುವೈದ್ಯಾಧಿಕಾರಿ ಡಾ. ಪ್ರಶಾಂತ್ ಶೆಟ್ಟಿ ಭಾಗವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷ ಎಸ್. ವಿ. ಭಟ್, ಟ್ರಸ್ಟಿ ಮೀನಾಲಕ್ಷಣಿ ಅಡ್ಯಂತಾಯ, ನಾರಾಯಣ ಎಂ. ಹೆಗಡೆ, ಕೋಶಾಧಿಕಾರಿ ಗಣೇಶ್ ಬ್ರಹ್ಮಾವರ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಕಾರ್ಯಕಾರಿ ಸಮಿತಿ ಸದಸ್ಯರಾದ ಯು. ವಿಶ್ವನಾಥ ಶೆಣೈ, ಕೆ. ಸದಾಶಿವ ರಾವ್, ಅನಂತರಾಜ ಉಪಾಧ್ಯಾಯ, ಕಿಶೋರ್ ಸಿ. ಉದ್ಯಾವರ, ನಟರಾಜ ಉಪಾಧ್ಯಾಯ, ಎ. ಅಜಿತ್ ಕುಮಾರ್, ಅಶೋಕ ಎಂ. ಸಹಕರಿಸಿದರು. ಸಂಸ್ಥೆಯ ಉಪಾಧ್ಯಕ್ಷ ವಿ. ಜಿ. ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾಪ್ರಸಾದ್ ವಂದಿಸಿದರು. ನಿರಂಜನ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ 104 ವಿದ್ಯಾರ್ಥಿಗಳು ಭಾಗವಹಿಸಿದ್ದು, ಗುರು ಬನ್ನಂಜೆ ಸಂಜೀವ ಸುವರ್ಣ ನಿರ್ದೇಶನದಲ್ಲಿ ಶಿಬಿರಾರ್ಥಿಗಳಿಗೆ ನೃತ್ಯ, ಅಭಿನಯ, ಮುಖವರ್ಣಿಕೆ, ವೇಷಭೂಷಣದ ತರಬೇತಿಯೊಂದಿಗೆ ಯಕ್ಷಗಾನದ ಕುರಿತ ಹಲವು ಮಾಹಿತಿಗಳನ್ನು ನೀಡಲಾಗುತ್ತಿದೆ.