ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.
ಉಡುಪಿ: ಸರ್ವ ರೀತಿಯಲ್ಲಿ ಸಮರ್ಥರಾದವರನ್ನು ರಾಜ ಎನ್ನುತ್ತಾರೆ. ಗಣಪತಿ ವಿಘ್ನರಾಜ. ಕೆಟ್ಟ ಕೆಲಸ ಮಾಡಿದಾಗ ವಿಘ್ನಗಳನ್ನು ತಂದಿಡುವುದು, ಒಳ್ಳೆಯ ಕೆಲಸ ಮಾಡಿದಾಗ ವಿಘ್ನಗಳನ್ನು ಪರಿಹರಿಸುವ ಸಾಮರ್ಥ್ಯ ಗಣೇಶನಲ್ಲಿದೆ. ಹೀಗಾಗಿ ಮಹಾಗಣಪತಿ ಅನುಗ್ರಹ ಎಲ್ಲರಿಗೂ ಅಗತ್ಯ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಮಂಗಳವಾರ ಕಡಿಯಾಳಿ ಗಣೇಶೋತ್ಸವ ಸಮಿತಿ ವಜ್ರ ಮಹೋತ್ಸವ ಕಚೇರಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ವಜ್ರ ಮಹೋತ್ಸವದ ಲಾಂಛನವನ್ನು ಉದ್ಯಮಿ ನಾಗೇಶ್ ಹೆಗ್ಡೆ ಬಿಡುಗಡೆಗೊಳಿಸಿದರು. ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ವಸಂತ್ ಭಟ್, ವಜ್ರ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ, ಶಾಸಕ ಯಶ್ಪಾಲ್ ಸುವರ್ಣ, ಕಡಿಯಾಳಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ರವಿರಾಜ ಆಚಾರ್ಯ, ಮಂಜುನಾಥ ಹೆಬ್ಬಾರ್ ಉಪಸ್ಥಿತರಿದ್ದರು. ರಾಘವೇಂದ್ರ ಕಿಣಿ ಸ್ವಾಗತಿಸಿದರು. ಗಿರೀಶ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಕಡಿಯಾಳಿ ರಿಕ್ಷಾ ನಿಲ್ದಾಣದಿಂದ ದೇವಸ್ಥಾನದವರೆಗೆ ಶ್ರೀಗಳನ್ನು ಚಂಡೆ ಭಜನೆಯೊಂದಿಗೆ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು.