ಹೊಂಡಗಳಿಂದ ತುಂಬಿರುವ ಕದಿಕೆ ಹೊಗೆಗುಡ್ಡೆ ಸಂಪರ್ಕ ರಸ್ತೆ
ಗ್ರಾಮೀಣ ಭಾಗದ ಜನರ ಜೀವನಾಡಿಯಾಗಿರುವ ಹಳೆಯಂಗಡಿ ಹೊಗೆಗುಡ್ಡೆ ಹಾಗೂ ಕದಿಕೆ ಪ್ರದೇಶದ ಏಕೈಕ ಸಂಪರ್ಕ ರಸ್ತೆ ಸಂಪೂರ್ಣ ಹೊಂಡ-ಗುಂಡಿಗಳಿಂದ ಆವೃತವಾಗಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಹೊಂಡಮಯ ರಸ್ತೆ
ಕದಿಕೆ ಸೇತುವೆಯಿಂದ ಪಡುಪಣಂಬೂರು ಹಾಗೂ ಚಿತ್ರಾಪು ಮೂಲಕ ಮೂಲ್ಕಿಗೆ ಸಂಪರ್ಕಿಸುವ ರಸ್ತೆಯಲ್ಲಿ ಗುಂಡಿಗಳೇ ಹೆಚ್ಚಾಗಿವೆ. ಪಂಚಾಯಿತಿ ವತಿಯಿಂದ ಜಲ್ಲಿಪುಡಿ ತುಂಬಿಸಿ ಕೈತೊಳೆದುಕೊಳ್ಳಲಾಗಿದೆಯೇ ಹೊರತು ಶಾಶ್ವತ ದುರಸ್ತಿ ನಡೆದಿಲ್ಲ.
ಬೀದಿ ದೀಪದ ಕೊರತೆ
ಈ ಭಾಗದಲ್ಲಿ ಬೀದಿದೀಪಗಳು ಸರಿಯಾಗಿ ಉರಿಯುತ್ತಿಲ್ಲ. ಇದರೊಂದಿಗೆ ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ರಾತ್ರಿ ವೇಳೆ ಪಾದಚಾರಿಗಳು ಕತ್ತಲಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಇದೆ.
ತ್ಯಾಜ್ಯದ ರಾಶಿ
ಕದಿಕೆ ಸೇತುವೆಯ ಆರಂಭದಲ್ಲೇ ರಸ್ತೆಬದಿಯಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿದ ಗೃಹತ್ಯಾಜ್ಯವನ್ನು ಎಸೆಯಲಾಗುತ್ತಿದೆ. ಇದರಿಂದ ಪರಿಸರ ಪೂರ್ತಿ ದುರ್ವಾಸನೆಯಿಂದ ಕೂಡಿದ್ದು, ಬೀದಿನಾಯಿಗಳ ಕಾಟವೂ ಮಿತಿಮೀರಿದೆ.
ನೆರೆ ಭೀತಿ
ಸೇತುವೆ ಬಳಿ ಅತಿಯಾಗಿ ಬೆಳೆದಿರುವ ಕಾಂಡ್ಲಾ ಕಾಡು ನದಿ ಪಾತ್ರವನ್ನು ಕುಗ್ಗಿಸುತ್ತಿದ್ದು, ಮುಂಬರುವ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ.
ಬ್ರಹ್ಮ ಕಲಶೋತ್ಸವದ ಆತಂಕ
ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಸಮೀಪಿಸುತ್ತಿದ್ದು, ಈ ರಸ್ತೆ ಭಕ್ತರ ಸಂಚಾರಕ್ಕೆ ಅತಿ ಮುಖ್ಯ. ಉತ್ಸವದ ಮೊದಲೇ ರಸ್ತೆ ದುರಸ್ತಿಯಾಗದಿದ್ದರೆ ಸಂಚಾರ ದಟ್ಟಣೆ ಹಾಗೂ ಅಪಘಾತಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
ಚಿತ್ರಾಪು ಪ್ರದೇಶದಿಂದ ಕದಿಕೆವರೆಗಿನ ರಸ್ತೆ ಸಂಪೂರ್ಣ ಹಾಳಾಗಿದೆ. ರಾತ್ರಿ ವೇಳೆ ಸಂಚರಿಸುವುದು ನಾಯಿಗಳ ಕಾಟದಿಂದಾಗಿ ಹರಸಾಹಸವೇ ಸರಿ. ಜನಪ್ರತಿನಿಧಿಗಳು ತಕ್ಷಣ ಗಮನಹರಿಸಲಿ.
ಪಡುಪಣಂಬೂರು ಪಂಚಾಯಿತಿ ಮನವಿಯಂತೆ 50 ಲಕ್ಷ ರೂ. ಅನುದಾನದ ನಿರೀಕ್ಷೆಯಿದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 3.5 ಕಿ.ಮೀ ರಸ್ತೆ ಪರಿಶೀಲನೆ ನಡೆದಿದ್ದು, ಕದಿಕೆ ಸೇತುವೆ ಮಾರ್ಗವಾಗಿ ಭಗವತಿ ಭಂಡಾರ ಮನೆಯ ವರೆಗೆ ಶೀಘ್ರವೇ ಡಾಂಬರೀಕರಣಗೊಳ್ಳಲಿದೆ.