ಹಿರಿಯಡ್ಕದ ಕೆಪಿಎಸ್‌ನಲ್ಲಿ ಹೊಸ ಕಟ್ಟಡ ನಿರ್ಮಾಣದ ಒಪ್ಪಂದಕ್ಕೆ ಸಹಿ ಮಾಡುವ ಕಾರ್ಯಕ್ರಮವನ್ನು ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಹರೀಶ್ ರಾವ್, ಸೌಮ್ಯಕಾಂತ್, ರಚಿತ್ ಶ್ರೀವಾಸ್ತವ್, ಮಂಜುನಾಥ್ ಭಟ್, ಪ್ರಕಾಶ್ ಪ್ರಭು, ನಟರಾಜ್ ಹೆಗ್ಡೆ, ರೇಣುಕಾ ಇತರರಿದ್ದರು.
* ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಭಿಪ್ರಾಯ
* ಹಿರಿಯಡ್ಕ ಕೆಪಿಎಸ್‌ನಲ್ಲಿ ಕಟ್ಟಡ ನಿರ್ಮಾಣಕ್ಕೆ ಒಪ್ಪಂದ
ಉಡುಪಿ: ನಮ್ಮ ಶರೀರ ಮತ್ತು ಗಳಿಸಿದ ಸಂಪತ್ತು ಶಾಶ್ವತವಲ್ಲ. ನಮ್ಮ ಬೆನ್ನ ಹಿಂದೆಯೇ ಮೃತ್ಯು ಸದಾ ಇರುತ್ತದೆ. ಹೀಗಾಗಿ ನಾವೆಲ್ಲರೂ ಸತ್ಕರ್ಮಗಳ ಮೂಲಕ ಧರ್ಮ ಮಾರ್ಗದ ಮೂಲಕ ಪುಣ್ಯ ಸಂಗ್ರಹಿಸಬೇಕು. ಕೆಪಿಎಸ್ ಹಿರಿಯಡ್ಕದಲ್ಲಿ ಮಕ್ಕಳ ಭವಿಷ್ಯ ರೂಪಿಸುವ ಅತ್ಯುನ್ನತ ಧರ್ಮ ಸಂಗ್ರಹದ ಕೆಲಸವಾಗಿದೆ ಎಂದು ಕಾಪು ಶಾಸಕ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಅಭಿಪ್ರಾಯಪಟ್ಟರು.
ಉಡುಪಿ ಹಿರಿಯಡ್ಕದ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಆವರಣದಲ್ಲಿ ಆರ್‌ಇಸಿ ಫೌಂಡೇಷನ್ ನವದೆಹಲಿ ಇವರ ಸಿಎಸ್‌ಆರ್ ಫಂಡ್‌ನಲ್ಲಿ ೩.೬೦ ಕೋಟಿ ರೂ. ವೆಚ್ಚದಲ್ಲಿ ಪ್ರಾಥಮಿಕ ಶಾಲೆಯ ಹೊಸ ಕಟ್ಟಡ (ಬ್ಲಾಕ್-ಬಿ) ನಿರ್ಮಾಣದ ಐತಿಹಾಸಿಕ ಸಾಮರಸ್ಯ ಒಪ್ಪಂದಕ್ಕೆ ಸಹಿ ಮಾಡುವ ಮತ್ತು ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ವತಿಯಿಂದ ೨೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಹೈಟೆಕ್ ಶೌಚಾಲಯ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ, ಶಿಕ್ಷಣಕ್ಕೆ ಆದ್ಯತೆ
ಎಂಆರ್‌ಪಿಎಲ್ ಸಂಸ್ಥೆಯ ಹಿರಿಯ ಅಧಿಕಾರಿ ಹರೀಶ್ ರಾವ್ ಮಾತನಾಡಿ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಯೊಂದು ೭೫ ವರ್ಷ ಪೂರೈಸಿ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಮೂಲಸೌಕರ್ಯಕ್ಕಾಗಿ ಇಷ್ಟೊಂದು ಅನುದಾನ ಪಡೆದುಕೊಳ್ಳುತ್ತಿರುವುದು ಜಿಲ್ಲೆಗೆ ಹೆಮ್ಮೆಯ ವಿಚಾರ. ಶಿಕ್ಷಣ, ಮಕ್ಕಳ ಸ್ವಚ್ಛತೆ ಮತ್ತು ಆರೋಗ್ಯಕ್ಕೆ ನಮ್ಮ ಸಂಸ್ಥೆ ಸದಾ ಆದ್ಯತೆ ನೀಡುತ್ತದೆ ಎಂದರು.
ಉಡುಪಿ ಡಯಟ್ ಪ್ರಾಂಶುಪಾಲ ಡಾ. ಅಶೋಕ್ ಕಾಮತ್ ಮಾತನಾಡಿದರು. ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಎಸ್‌ಡಿಎಂಸಿ ಉಪಾಧ್ಯಕ್ಷ ಬಿ.ಎಲ್. ವಿಶ್ವಾಸ್, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು.
ಸಂಸ್ಥೆಗೆ ಆರ್ಥಿಕ ನೆರವು, ಸಹಕಾರ ನೀಡಿದ ಆರ್‌ಇಸಿ ಫೌಂಡೇಷನ್‌ನ ಬೆಂಗಳೂರಿನ ಪ್ರಾದೇಶಿಕ ಕಚೇರಿಯ ಹಿರಿಯ ಮುಖ್ಯ ಯೋಜನಾ ವ್ಯವಸ್ಥಾಪಕ ಸೌಮ್ಯಕಾಂತ್, ಮೆನೇಜರ್ ರಚಿತ್ ಶ್ರೀವಾಸ್ತವ್ ಹಾಗೂ ಶೌಚಾಲಯ ಸಂಕೀರ್ಣ ನಿರ್ಮಿಸಿಕೊಟ್ಟ ಎಂಆರ್‌ಪಿಎಲ್‌ನ ಅಧಿಕಾರಿ ಹರೀಶ್ ರಾವ್ ಅವರನ್ನು ಸನ್ಮಾನಿಸಲಾಯಿತು.
ಉಪ ಪ್ರಾಂಶುಪಾಲ ಪ್ರಕಾಶ್ ಪ್ರಭು ಸ್ವಾಗತಿಸಿದರು. ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಬಳ್ಳಿ ನಟರಾಜ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ರೇಣುಕಾ ವಂದಿಸಿದರು. ಅಧ್ಯಾಪಕ ರವೀಂದ್ರ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಎಸ್‌ಡಿಎಂಸಿ ಸದಸ್ಯರು, ಉಪನ್ಯಾಸಕರು, ಶಿಕ್ಷಕ ವೃಂದದವರು, ಅಮೃತ ಮಹೋತ್ಸವ ಸಮಿತಿಯ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು, ಪಾಲಕರು ಪಾಲ್ಗೊಂಡಿದ್ದರು.
ನವದೆಹಲಿಯ ಆರ್‌ಇಸಿ ಫೌಂಡೇಷನ್ ಹಿರಿಯಡ್ಕದ ಶಾಲೆಯ ಹೊಸ್ತಿಲಿಗೆ ಬರಲು, ಈ ಬೃಹತ್ ಯೋಜನೆ ನನಸಾಗಲು ಶಾಲೆಯ ಹೆಮ್ಮೆಯ ಹಳೆಯ ವಿದ್ಯಾರ್ಥಿ, ಭಾರತ ಸರ್ಕಾರದ ಮುಖ್ಯ ಕಾರ್ಯದರ್ಶಿಯೂ ಆದ ರಾಜೇಶ್ ಪ್ರಸಾದ್ (ಐಎಎಸ್) ಕಾರಣರಾಗಿದ್ದಾರೆ. ಇದು ಕಾರ್ಪೊರೇಟ್ ಇಂಡಿಯಾ, ಹಳೆಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಆಡಳಿತ ಒಟ್ಟಾಗಿ ನಮ್ಮ ಮಕ್ಕಳಿಗೆ ನೀಡುತ್ತಿರುವ ಪವಿತ್ರ ಕೊಡುಗೆಯಾಗಿದೆ.
— ಮಂಜುನಾಥ್ ಭಟ್. ಸಂಸ್ಥೆಯ ಪ್ರಾಂಶುಪಾಲ.