ಉದ್ಯಮಿ ಕಾಡೂರು ಸೀತಾರಾಮ ಶಾಸ್ತ್ರಿ.
* ಕಲಾರಾಧನೆಯ 'ಸ್ವಾತಂತ್ರ್ಯೋತ್ಸವ' ತಾಳಮದ್ದಳೆ
ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶೀರೂರು ಮಠದ ಆಶ್ರಯದಲ್ಲಿ "ಸುಶಾಸನ ಉಡುಪಿ' ಪ್ರಸ್ತುತ ಪಡಿಸುವ ಉಡುಪಿ ಸುಧಾಕರ್ ಆಚಾರ್ಯ ಅವರ ಕಲಾರಾಧನೆಯ 36ನೇ ವರ್ಷದ 'ಸ್ವಾತಂತ್ರ್ಯೋತ್ಸವ ತಾಳಮದ್ದಳೆ'ಯ ಆಚರಣೆ ಆ.15ರಂದು ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ. ಖ್ಯಾತ ಅರ್ಥಧಾರಿಗಳ ಉಪಸ್ಥಿತಿಯಲ್ಲಿ 'ಕೃಷ್ಣಾರ್ಪಣ' ತಾಳಮದ್ದಳೆ ನಡೆಯಲಿದೆ.
ಪುತ್ತೂರಿನ ಯಕ್ಷರಂಗ ಸಂಸ್ಥೆಯ ಹಾಗೂ ಪುತ್ತೂರು ನಗರ ಹವ್ಯಕ ಸಂಘಟನೆಯ ಅಧ್ಯಕ್ಷ, ತಾಳಮದ್ದಳೆ ಸಂಘಟಕ ಹಾಗೂ ಉದ್ಯಮಿಯಾದ ಕಾಡೂರು ಸೀತಾರಾಮ ಶಾಸ್ತ್ರಿ ಅವರಿಗೆ ಸುಶಾಸನ ಗೌರವ ಪುರಸ್ಕಾರವನ್ನು ಸಂಜೆ 6 ಗಂಟೆಗೆ ವೇದವರ್ಧನ ಶ್ರೀಗಳು ಪ್ರದಾನ ಮಾಡಲಿದ್ದಾರೆ.
ಸ್ವಾತಂತ್ರ್ಯೋತ್ಸವ ತಾಳಮದ್ದಳೆಯಲ್ಲಿ ದಾಖಲೆಯ ನಿರಂತರ 25 ವರ್ಷ ಭಾಗವತಿಕೆ ಮಾಡಿದ್ದ ದಿ. ದಿನೇಶ್ ಅಮ್ಮಣ್ಣಾಯ ಅವರ ಸ್ಮರಣಾರ್ಥ ಸಂಜೆ 7ರಿಂದ ಮಧ್ಯರಾತ್ರಿ 1 ಗಂಟೆಯ ವರೆಗೆ 'ಸ್ಮೃತಿ' ಕಾರ್ಯಕ್ರಮ ಆಯೋಜಿಸಲಾಗಿದೆ.
ಅಮ್ಮಣ್ಣಾಯ ಹಿಟ್ಸ್, ಎವರ್ಗ್ರೀನ್ ಪ್ರಸಂಗಗಳಾದ ಸತ್ಯಹರಿಶ್ಚಂದ್ರ, ಮಾನಿಷಾದ, ಅಕ್ಷಯಾಂಬರ ಪ್ರದರ್ಶನಗೊಳ್ಳಲಿದೆ. ಭಾಗವತಿಕೆಯಲ್ಲಿ ಪಟ್ಲ ಸತೀಶ್ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ, ಡಾ. ಪ್ರಖ್ಯಾತ್ ಶೆಟ್ಟಿ, ಭರತರಾಜ್ ಶೆಟ್ಟಿ ಸಿದ್ಧಕಟ್ಟೆ ಹಾಗೂ 44 ಶ್ರೇಷ್ಠ ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.