ಉಡುಪಿ: ಪತ್ರಕರ್ತರಾದವರು ಇಂತಹುದೇ ವಿಷಯದಲ್ಲಿ ಪರಿಣತರು ಎಂಬುವುದಿಲ್ಲ. ಸೂರ್ಯನ ಕೆಳಗೆ ಘಟಿಸುವ ಎಲ್ಲ ವಿಚಾರ, ವಿಷಯಗಳ ಜ್ಞಾನ ಇರಬೇಕು. ರಾಜ್ಯದ ಕೆನೆಪದರದಲ್ಲಿರುವ ಎಲ್ಲರ ಸಂಪರ್ಕ, ಎಲ್ಲರನ್ನೂ ಪ್ರಶ್ನಿಸುವ ಹಕ್ಕು ಇರುವುದು ಪತ್ರಕರ್ತರ ವಿಶೇಷ. ಆದರೆ. ತಾನು ಹಿಂದೆ ನಿಂತು ಸಮಾಜವನ್ನು ಮುಂದಿಡಬೇಕಾದ ಕಷ್ಟದ ಕೆಲಸ ನಿಭಾಯಿಸುವ ಅವರ ಕಾರ್ಯದ ಕುರಿತು ಗಣೇಶ ಅಮೀನಗಡ ರಚಿಸಿದ ಪುಸ್ತಕ ಎಲ್ಲ ಪತ್ರಕರ್ತರಿಗೆ ಕೈಪಿಡಿಯಾಗಿದೆ ಎಂದು ಹಿರಿಯ ಪತ್ರಕರ್ತ ಡಾ. ರಾಘವ ನಂಬಿಯಾರ ಅಭಿಪ್ರಾಯಪಟ್ಟರು.
ಉಡುಪಿಯ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಕಾರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಗಣೇಶ ಅಮೀನಗಡ ವಿರಚಿತ 'ಪತ್ರಕರ್ತನ ಅನುಭವಗಳು' (ಪತ್ರಿಕೋದ್ಯಮ ಪಯಣ) ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಪತ್ರಕರ್ತರ ಜೀವನದ ಕಥೆ
ಕೃತಿಕಾರ ಗಣೇಶ ಅಮೀನಗಡ ಮಾತನಾಡಿ, ಬೇರೆಯವರು ಬರೆದ ಮುನ್ನುಡಿ, ಬೆನ್ನುಡಿ ಇಲ್ಲದ ಪುಸ್ತಕವಿದು. ಪತ್ರಕರ್ತನಾಗಿ ಬಂದ ನನ್ನ ಬದುಕು ಬದಲಾಯಿಸಿದ ಕರಾವಳಿಯಿದು. ಇಲ್ಲಿನವರು ನಗುಮುಖದವರಲ್ಲದಿದ್ದರೂ ಇಲ್ಲಿನ ಜನರ ಸಂಸ್ಕೃತಿ ಶ್ರೀಮಂತವಾಗಿದೆ. ವಿಶ್ವ ಸುಂದರಿಯರಿಂದ ಹಿಡಿದು ಅಂಡವರ್ಲ್ಡ್ ಡಾನ್ಗಳೂ ಇರುವ ತಾಣವಿದು. ವಿಶೇಷ ವರದಿ ಅಥವಾ ಲೇಖನಗಳಿಗೆ ಇಲ್ಲಿ ಬರವೇ ಇಲ್ಲ. ಸೂಯೋರ್ದಯದಿಂದ ಸೂರ್ಯಾಸ್ತದವರೆಗಿನ ಪ್ರಕೃತಿಯ ಸೊಬಗು ಇಲ್ಲಿದೆ. ಪತ್ರಕರ್ತ ಹೇಗಿರಬೇಕು, ಹೇಗಿರಬಾರದು ಎನ್ನುವುದನ್ನು ದಾಖಲಿಸಿದ್ದೇನೆ. 'ನೆವರ್ ರಿಟೈರ್ಡ್- ನೆವರ್ ಟೈಯರ್ಡ್' ಎಂಬ ಪತ್ರಕರ್ತರ ಬದುಕು, ಜೀವನ, ಅನುಭವದ ಕುರಿತು ನನ್ನ ಪುಸ್ತಕ ತಿಳಿಸಲಿದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಜಿ. ಕುರ್ಯ ಅಧ್ಯಕ್ಷತೆ ವಹಿಸಿದ್ದರು. ವಾರ್ತಾಧಿಕಾರಿ ಮಂಜುನಾಥ, ಸಂಘದ ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ, ಸಂಘದ ಕೋಶಾಧಿಕಾರಿ ಹರೀಶ ಕುಂದರ್ ಉಪಸ್ಥಿತರಿದ್ದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ ಸ್ವಾಗತಿಸಿದರು ಸಂಘದ ಸದಸ್ಯ ರಹೀಮ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು.
ಇಂದಿನ ಪತ್ರಿಕೋದ್ಯಮ ಎಷ್ಟರ ಮಟ್ಟಿಗೆ ಸತ್ಯ ಬರೆಯುವಂತಹ ಅವಕಾಶ ನೀಡಿದೆ ಎನ್ನುವುದನ್ನು ಅವಲೋಕಿಸುವ, ಪರಾಮರ್ಶಿಸುವ ಅಗತ್ಯತೆ ಇದೆ. ಇಂದಿನ ಪತ್ರಕರ್ತರೆಲ್ಲರೂ ಪತ್ರಿಕಾ ದಂಧೆಯ ಕಾರ್ಮಿಕರಾಗಿ ಬದಲಾಗಿರುವುದು ನೋವಿನ ಸಂಗತಿ. ದೇಗುಲಗಳಿಗೆ ಹೋಗದೆ ಭಾರತದ ಹಬ್ಬ-ಹರಿದಿನಗಳ ಆಚರಣೆ, ಸಂಸ್ಕೃತಿ ಅರಿಯದೆ ವಿರೋಧಿಸುತ್ತಿರುವ ಎಡಪಂಥೀಯರ ಧೋರಣೆಯೇ ಅರ್ಥವಾಗುತ್ತಿಲ್ಲ. ದುಡಿಯುವವರ ಕೈಗೆ ಬಂಡವಾಳ ಲಭಿಸಬೇಕು ಎನ್ನುವುದು ಮಾರ್ಕ್ಸ್ನ ವಾದವಾಗಿತ್ತು. ಆದರೆ, ಉತ್ಪನ್ನ ಹೆಚ್ಚಾಗುವಿಕೆಯನ್ನೇ ತಡೆಯಲು ಅವರು ದಾರಿ ಹಿಡಿದಿರುವುದು ಸೂಕ್ತವಲ್ಲ.ಡಾ. ರಾಘವ ನಂಬಿಯಾರ. ಹಿರಿಯ ಪತ್ರಕರ್ತ.