ಕುಂದಾಪುರ: ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಂದ ಶಸ್ತ್ರಚಿಕಿತ್ಸೆಗಾಗಿ ಹಣ ಪಡೆಯುತ್ತಿರುವುದಾಗಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಿದ್ದಕ್ಕೆ ದ್ವೇಷದಿಂದ ಸರ್ಕಾರಿ ವೈದ್ಯರೊಬ್ಬರು ಕುಂದಾಪುರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಪತ್ರಕರ್ತರೊಬ್ಬರಿಗೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ.
ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಹಲ್ಲೆಗೊಳಗಾದವರು. ಈ ಹಿಂದೆ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದು, ಈಗ ಕಾರ್ಕಳಕ್ಕೆ ವರ್ಗಾವಣೆಗೊಂಡಿರುವ ವೈದ್ಯ ಡಾ.ಮಹೇಂದ್ರ ಕುಮಾರ್ ಶೆಟ್ಟಿ ಹಲ್ಲೆಗೈದ ಆರೋಪಿ.
ಘಟನೆ ಹಿನ್ನೆಲೆ
ಶ್ರೀಕಾಂತ್ ಹೆಮ್ಮಾಡಿ ಪತ್ನಿಯೊಂದಿಗೆ ಕುಂದಾಪುರದ ಹೋಟೆಲ್‌ನಲ್ಲಿ ಚಹಾ ಕುಡಿಯುತ್ತಿದ್ದಾಗ ಅಲ್ಲಿಯೇ ಪಕ್ಕದ ಟೇಬಲ್‌ನಲ್ಲಿ ಬಂದು ಕುಳಿತಿದ್ದ ಡಾ.ಮಹೇಂದ್ರ ಕುಮಾರ್ ಶೆಟ್ಟಿ ಏಕಾಏಕಿ ಕಾಲರ್ ಹಿಡಿದು ಎಳೆದು ಕೈಯಿಂದ ಎದೆಗೆ, ಮುಖಕ್ಕೆ ಹೊಡೆದಿದ್ದಲ್ಲದೆ, ಎಡಕೈಯನ್ನು ಹಿಡಿದು, ಶ್ರೀಕಾಂತ್ ಅವರನ್ನು ಎಳೆದುಕೊಂಡು ಸ್ವಲ್ಪ ದೂರ ಹೋಗಿ, ನನ್ನ ಮೇಲೆ ಪತ್ರಿಕೆಯಲ್ಲಿ ಸುಳ್ಳು ಸುದ್ದಿ ಬರೆಯುತ್ತೀಯಾ? ನಿನ್ನ ಪೆನ್ನು ಖಡ್ಗ ಎಂದು ತಿಳಿದಿದ್ದೀಯಾ? ಎಂದು ಬೈದು, ಇನ್ನೂ 15ರಿಂದ 20 ಜನರನ್ನು ಕರೆಸಿ, ನಿನ್ನನ್ನು ಕೊಲೆ ಮಾಡದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ.
ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ವೈದ್ಯರು ಒಳ ರೋಗಿಗಳಿಂದ ಚಿಕಿತ್ಸೆ ವೇಳೆ ಹಣ ಪಡೆಯುತ್ತಿರುವ ಬಗ್ಗೆ ಈ ಹಿಂದೆ ನಾನು ಪತ್ರಿಕೆಯಲ್ಲಿ ಪ್ರಕಟಿಸಿರುವ ವಿಚಾರದಲ್ಲಿ ದ್ವೇಷದಿಂದ ಹಲ್ಲೆ ನಡೆಸಿರುವುದಾಗಿ ಶ್ರೀಕಾಂತ್ ಹೆಮ್ಮಾಡಿ ದೂರು ನೀಡಿದ್ದಾರೆ. ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೆ ತೀವ್ರ ಖಂಡನೆ
ಉಡುಪಿ ಜಿಲ್ಲಾ ಹಾಗೂ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಶ್ರೀಕಾಂತ್ ಹೆಮ್ಮಾಡಿ ಮೇಲಿನ ಹಲ್ಲೆಯನ್ನು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಖಂಡಿಸಿದೆ. ಈ ಪ್ರಕರಣವನ್ನು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಬೇಕು ಎಂದು ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನ ಮಠ ಆಗ್ರಹಿಸಿದ್ದಾರೆ.