ಕಾರ್ಯದರ್ಶಿ ರೇವತಿ ನಾಡ್ಗಿರಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು
ಉಡುಪಿ: ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನಡೆಯಲಿರುವ ಮಹಾರುದ್ರಯಾಗದ ಪ್ರಯುಕ್ತ ಮೇ 18ರಂದು ಕೊಡವೂರಿನ ವಿಪ್ರಶ್ರೀ ಸಭಾಭವನದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಉದ್ಯೋಗ ಮೇಳದ ಸಂಚಾಲಕಿ ಡಾ.ದಿವ್ಯಾ ರಾಣಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೇಳದಲ್ಲಿ 60ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿದ್ದು, 6000ಕ್ಕೂ ಅಧಿಕ ಉದ್ಯೋಗ ಅವಕಾಶಗಳು ಲಭ್ಯ ಇವೆ. ಮ್ಯಾನೇಜ್ಮೆಂಟ್, ಎಂಜಿನಿಯರಿಂಗ್, ಉತ್ಪಾದನಾ ವಲಯ, ಆರೋಗ್ಯ ಸೇವೆ, ಹೋಟೆಲ್, ಬ್ಯಾಂಕಿಂಗ್ ಮತ್ತು ಹಣಕಾಸು, ಮಾರಾಟ ಮತ್ತು ಮಾರುಕಟ್ಟೆ, ತಾಂತ್ರಿಕ ಸೇವೆಗಳು, ಲಾಜಿಸ್ಟಿಕ್ಸ್ ಹಾಗೂ ಸೇವಾ ವಲಯ, ಕೌಶಲ್ಯ ವಿವಿಧ ಕ್ಷೇತ್ರಗಳ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ ಎಂದರು.
ಅಭ್ಯರ್ಥಿಗಳು ನೇರ ಸಂದರ್ಶನಗಳಲ್ಲಿ ಭಾಗವಹಿಸಬಹುದು. ಜೊತೆಗೆ ಸ್ವಂತ ಉದ್ಯಮದಲ್ಲಿ ಆಸಕ್ತಿ ಹೊಂದಿರುವವರಿಗಾಗಿ ಕಂಪನಿ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಬಹುದು. ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಉಡುಪಿಯಲ್ಲಿ ಉದ್ಯೋಗ ಅವಕಾಶಗಳನ್ನು ಅರಿಯುವ ಅವಕಾಶ ಸಿಗಲಿದೆ. ಈ ಬಾರಿ ವಿಶೇಷವಾಗಿ ಸ್ಮಾರ್ಟ್ ಅಪ್ ಹಾಗೂ ಸ್ವಯಂ ಉದ್ಯೋಗ ಮಾರ್ಗದರ್ಶನ ಪಡೆಯಬಹುದು ಎಂದರು.
ಕಾರ್ಯದರ್ಶಿ ರೇವತಿ ನಾಡ್ಗಿರಿ ಮಾತನಾಡಿ, ಬೆಳಗ್ಗೆ 10.30ಕ್ಕೆ ಉದ್ಯೋಗ ಮೇಳವನ್ನು ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಉದ್ಯಮಿ ಹರಿಪ್ರಸಾದ್ ರೈ, ನಗರಸಭೆ ಪೌರಾಯುಕ್ತ ಮಹಂತೇಶ್ ಹಂಗರಗಿ, ಅಮ್ಮುಂಜೆ ಪ್ರಭಾಕರ ನಾಯಕ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಸಾತ್ವಿಕ್ ಎಸ್. ಆಚಾರ್ಯ, ಧೃವ್ ರಾಜ್ ಉಪಸ್ಥಿತರಿದ್ದರು.