ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರ.
ನರೇಂದ್ರ ಎಸ್.ಮರಸಣಿಗೆ ಹೆಬ್ರಿ
ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಪ್ರಮುಖ ಹುದ್ದೆಗಳನ್ನು ಕಡಿತಗೊಳಿಸಿ ಎಂಬಿಬಿಎಸ್ ವೈದ್ಯರನ್ನು ನೇಮಿಸಬೇಕೆಂಬ ನಿಯಮದಿಂದ ಗ್ರಾಮೀಣ ಭಾಗದ ಜನರು ಉತ್ತಮ ಆರೋಗ್ಯ ಸೇವೆಯಿಂದ ವಂಚಿತರಾಗಲಿದ್ದಾರೆ ಎಂಬ ಕೂಗು ಸಾರ್ವಜನಿಕ ವಲಯದಲ್ಲಿದೆ.
ಆರೋಗ್ಯ ಕೇಂದ್ರದಲ್ಲಿರುವ ತಜ್ಞ ವೈದ್ಯರನ್ನು ತಾಲೂಕು ಅಥವಾ ಜಿಲ್ಲಾ ಆಸ್ಪತ್ರೆಗೆ ವರ್ಗಾವಣೆ ಮಾಡುವುದರಿಂದ ಗ್ರಾಮೀಣ ಭಾಗದ ಜನರು ಹೆಚ್ಚಿನ ಚಿಕಿತ್ಸೆಗೆ 40 ಕಿ.ಮೀ. ದೂರದ ಜಿಲ್ಲಾಸ್ಪತ್ರೆಯನ್ನು ಅವಲಂಬಿಸಬೇಕಾಗುತ್ತದೆ. ಹೆಬ್ರಿ ತಾಲೂಕಿನ ನಾಡ್ಪಾಲು, ಕಬ್ಬಿನಾಲೆ ಗ್ರಾಮಗಳು ಐವತ್ತು ಕಿ.ಮೀ. ದೂರದಲ್ಲಿವೆ. ದೂರದ ಇದರಿಂದ ಬಡ ಜನರಿಗೆ ಸೇವೆಯಲ್ಲಿ ಸಮಸ್ಯೆ ಉಂಟಾಗುತ್ತದೆ ಎಂದು ಸಾರ್ವಜನಿಕರು ಕಳವಳ ವ್ಯಕ್ತಪಡಿಸುತ್ತಾರೆ.
ಇಲಾಖೆಯ ಉದ್ದೇಶವೇನು?
ಕೆಲವು ಸಮುದಾಯ ಆರೋಗ್ಯ ಕೇಂದ್ರಗಳು ಪ್ರಗತಿ ಸಾಧಿಸಿದ ಕಾರಣ, ಇಲ್ಲಿರುವ ತಜ್ಞ ವೈದ್ಯರನ್ನು ತಾಲೂಕು ಅಥವಾ ಜಿಲ್ಲಾ ಆಸ್ಪತ್ರೆಗೆ ವರ್ಗಾವಣೆ ಮಾಡುವುದರಿಂದ ಜನರಿಗೆ ಉತ್ತಮ ಸೇವೆ ನೀಡಬಹುದೆಂಬುದು ಇಲಾಖೆಯ ವಾದ. ಅಲ್ಲದೆ ಜಿಲ್ಲೆಯಲ್ಲಿರುವ ತಜ್ಞ ವೈದ್ಯರ ಮೂಲಕ ಜನರಿಗೆ ಆರೋಗ್ಯ ಸೌಲಭ್ಯ ಕಲ್ಪಿಸಬಹುದೆಂಬ ಉದ್ದೇಶವಿದೆ. ಅಲ್ಲದೆ ಹಲವಾರು ವರ್ಷಗಳಿಂದ ಒಂದೇ ಪ್ರದೇಶದಲ್ಲಿರುವ ವೈದ್ಯರ ಮೇಲೆ ನಿಯಂತ್ರಣ ಹೊಂದಲೂ ಇಲಾಖೆ ಈ ಕ್ರಮ ಕೈಗೊಂಡಿದೆ. ಪ್ರಸ್ತುತ ಇರುವ ವೈದ್ಯರನ್ನು ವರ್ಗಾವಣೆ ಮಾಡಿ ಆರೋಗ್ಯ ಕೇಂದ್ರಗಳಿಗೆ ಎಂಬಿಬಿಎಸ್ ವೈದ್ಯರನ್ನು ನೇಮಿಸಲು ಇಲಾಖೆ ಮುಂದಾಗಿದೆ.
ಹೆಬ್ರಿಯಲ್ಲಿ ಪ್ರಮುಖ ಹುದ್ದೆಗಳಿಲ್ಲ
ಹೆಬ್ರಿ ಆರೋಗ್ಯ ಕೇಂದ್ರದಲ್ಲಿ ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು, ಹಿರಿಯ ವೈದ್ಯಾಧಿಕಾರಿ ಹುದ್ದೆಗಳು ಖಾಲಿ ಇವೆ. ಅರಿವಳಿಕೆ ತಜ್ಞರು ವಾರದಲ್ಲಿ ಎರಡು ಬಾರಿ ಸಿಗುತ್ತಾರೆ. ಪೂರ್ಣ ಅವಧಿಯಲ್ಲಿ ದಂತ ವೈದ್ಯರು ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಮುಂದಿನ ದಿನಗಳಲ್ಲಿ ಖಾಲಿ ಹುದ್ದೆಗಳಿಗೆ ವೈದ್ಯರನ್ನು ನೇಮಿಸಬಹುದೆಂಬ ನಿರೀಕ್ಷೆ ಇತ್ತು. ಆದರೆ ಈಗ ವರ್ಗಾವಣೆ ಆದೇಶ ವಾಪಸ್ ಪಡೆದು ಹುದ್ದೆಗಳನ್ನು ಕಡಿತಗೊಳಿಸದಂತೆ ಜನರು ಮನವಿ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಪ್ರಮುಖ ಸೇವೆಗಳಲ್ಲಿ ವೃತ್ಯಯಗೊಂಡಾಗ ಸರ್ಕಾರಿ ಆಸ್ಪತ್ರೆಯಲ್ಲಿ ಜನರಿಗೆ ಸಮರ್ಪಕ ಸೇವೆ ದೊರೆಯುವುದಿಲ್ಲ. ಇಲಾಖೆ ಎಂಬಿಬಿಎಸ್ ವೈದ್ಯರನ್ನು ಮಂಜೂರು ಮಾಡುತ್ತದೆ ಎಂದು ಹೇಳಿದೆ. ಆದರೆ ಅದು ಎಷ್ಟರಮಟ್ಟಿಗೆ ಕಾರ್ಯಗತವಾಗುತ್ತದೆ ಎಂಬ ಪ್ರಶ್ನೆ ಮೂಡಿದೆ.
ಜಿಲ್ಲಾಸ್ಪತ್ರೆಗೆ ಬಹು ದೂರ ಹೋಗಬೇಕು
ಉಡುಪಿ ಜಿಲ್ಲೆಯಲ್ಲಿ ಆರು ಸಮುದಾಯ ಆರೋಗ್ಯ ಕೇಂದ್ರಗಳಿವೆ. ಬೈಂದೂರು, ಶಿರ್ವ, ಕೋಟ, ಬ್ರಹ್ಮಾವರ, ಹೆಬ್ರಿ, ನಿಟ್ಟೆಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಗಳು ಗ್ರಾಮೀಣ ಭಾಗದಲ್ಲಿ ಉತ್ತಮ ಸೇವೆಯನ್ನು ನೀಡುತ್ತಿವೆ. ಒಂದು ವೇಳೆ ಆರೋಗ್ಯ ಕೇಂದ್ರದ ವೈದ್ಯರನ್ನು ವರ್ಗಾವಣೆ ಮಾಡಿದಲ್ಲಿ ಹೆಬ್ರಿ ಹಾಗೂ ಬೈಂದೂರಿನ ಜನರು ತುರ್ತು ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಗೆ ಹೋಗಲು ಪರದಾಡಬೇಕಾಗುತ್ತದೆ. ಸಮಸ್ಯೆಗಳನ್ನು ಪರಾಮರ್ಶಿಸಿ ಜನರಿಗೆ ಸಮಸ್ಯೆಯಾಗದಂತೆ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.
ಜನರಿಗೆ ಗುಣಮಟ್ಟದ ಸೇವೆಯನ್ನು ನೀಡಲು ಇಲಾಖೆ ಯೋಜನೆ ರೂಪಿಸಿದೆ. ಕೆಲವರು ಅನೇಕ ವರ್ಷಗಳಿಂದ ಒಂದೇ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದಾರೆ. ಇಂದು ತಾಲೂಕು ಆಸ್ಪತ್ರೆಗಳಲ್ಲಿ ಹೆರಿಗೆ ಪ್ರಮಾಣ ಹೆಚ್ಚಾಗಿದೆ. ತಜ್ಞ ವೈದ್ಯರ ಅಗತ್ಯವಿರುವುದರಿಂದ ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ನೀಡಲು ಇಲಾಖೆ ಈ ಕ್ರಮ ಕೈಗೊಂಡಿದೆ.