ಉಡುಪಿ: ಕುರ್ಕಾಲು ಗ್ರಾಮದ ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದ ದೀಪೋತ್ಸವ ಕಾರ್ಯಕ್ರಮಕ್ಕೆ ಬಂದಿದ್ದ ವೃದ್ಧರೊಬ್ಬರನ್ನು ಪರಿಚಯಸ್ಥನೇ ಕಾರಿನಲ್ಲಿ ಕರೆದೊಯ್ದು, ಸುತ್ತಿಗೆಯಿಂದ ಹಲ್ಲೆ ನಡೆಸಿ 4.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ನ. 24ರಂದು ರಾತ್ರಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡ ಶಿರ್ವ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಡುಬೆಳ್ಳೆ ಗ್ರಾಮದ ಕುಂಜಾರುಗಿರಿ ನಿವಾಸಿ ಮುರಳಿಕೃಷ್ಣ ಉಪಾಧ್ಯಾಯ (47) ಬಂಧಿತ ಆರೋಪಿ. ನ. 24ರಂದು ರಾತ್ರಿ ಸುಮಾರು 8:30ರ ವೇಳೆಗೆ ರಾಜಮೂರ್ತಿ ಭಟ್ ಅವರು ಕುಂಜಾರುಗಿರಿ ದುರ್ಗಾದೇವಿ ದೇವಸ್ಥಾನದ ದೀಪೋತ್ಸವದಲ್ಲಿ ಭಾಗವಹಿಸಿದ್ದು, ಈ ವೇಳೆ ಅಲ್ಲಿಗೆ ಬಂದ ಪರಿಚಯಸ್ಥ ಮುರಳಿಕೃಷ್ಣ ಉಪಾಧ್ಯಾಯ, "ನಿಮ್ಮ ಬಳಿ ಸ್ವಲ್ಪ ಮಾತನಾಡಲು ಇದೆ" ಎಂದು ಹೇಳಿ ಭಟ್ ಅವರನ್ನು ದೇವಸ್ಥಾನದಿಂದ ಹೊರಗೆ ಕರೆದೊಯ್ದು ತನ್ನ ಕಾರಿನಲ್ಲಿ ಕುಳ್ಳಿರಿಸಿದ್ದಾನೆ. ಬಳಿಕ ತಾನು ಸುಮಾರು 60 ಎಕರೆ ಜಾಗದಲ್ಲಿ ಭತ್ತದ ಬೇಸಾಯ ಮಾಡುತ್ತಿದ್ದು, ಅದನ್ನು 200 ಎಕರೆಗೆ ವಿಸ್ತರಿಸಲು 25 ಲಕ್ಷ ರೂ. ಹಣದ ಅವಶ್ಯಕತೆಯಿದೆ. ಇದಕ್ಕೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾನೆ. ಇದಕ್ಕೆ ರಾಜಮೂರ್ತಿ ಭಟ್ ಒಪ್ಪದೇ ಇದ್ದಾಗ, ಕಾರಿನಲ್ಲಿದ್ದ ಸುತ್ತಿಗೆಯಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಬೆನ್ನಟ್ಟಿ ದೂಡಿ ಹಾಕಿ, ಭಟ್ ಕುತ್ತಿಗೆಯಲ್ಲಿದ್ದ ಸುಮಾರು 20 ಗ್ರಾಂ ತೂಕದ ಚಿನ್ನದ ಸರ ಹಾಗೂ 28 ಗ್ರಾಂ ತೂಕದ ತುಳಸಿ ಮಣಿ ಚಿನ್ನದ ಸರವನ್ನು ಕಿತ್ತುಕೊಂಡು ಕಾರು ಸಮೇತ ಪರಾರಿಯಾಗಿದ್ದನು.
ಕ್ಷಿಪ್ರ ಕಾರ್ಯಾಚರಣೆ
ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಶಿರ್ವ ಪೊಲೀಸರು ನ. 25ರಂದು ಆರೋಪಿ ಮುರಳಿಕೃಷ್ಣ ಉಪಾಧ್ಯಾಯನನ್ನು ದಸ್ತಗಿರಿ ಮಾಡಿದ್ದಾರೆ. ಬಂಧಿತನಿಂದ 1,90,000 ರೂ. ಮೌಲ್ಯದ ತುಂಡಾದ ತುಳಸಿ ಮಣಿಗಳ ಚಿನ್ನದ ಸರ, 2,60,000 ರೂ. ಮೌಲ್ಯದ ತುಂಡಾದ ಹವಳದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.