ಚಿನ್ನಾಭರಣ ಕಳವು 
ಉಡುಪಿ

ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

ಬೆಳ್ತಂಗಡಿ: ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ಯಾಡಿ ಗ್ರಾಮದ ಗುರಿಪಳ್ಳ ನಿವಾಸಿ ಶ್ರೀಧರ ನಾಯ್ಕ ಎಂಬುವರ ಮನೆಯಲ್ಲಿ ಯಾರೂ ಇಲ್ಲದ ಹಗಲು ಹೊತ್ತು ಮನೆಯ ಹೆಂಚು ತೆಗೆದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವುಗೈದಿದ್ದಾರೆ.
ಮನೆಯಲ್ಲಿ ನಾಲ್ವರು ಇದ್ದು ಶ್ರೀಧರ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಇತರರು ಕೆಲಸಕ್ಕೆಂದು ಹೊರ ಹೋಗಿದ್ದರು. ಕಳ್ಳರು ಹೆಂಚು ತೆಗೆದು ಒಳನುಗ್ಗಿದ್ದು ಮನೆಯ ಕಪಾಟಿನ ಬೀಗ ಮುರಿದು 10 ಲಕ್ಷ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣ ಕಳವುಗೈದಿದ್ದಾರೆ.
ಛಾವಣಿಯ ಹೆಂಚು ತೆಗೆದು ಒಳನುಗ್ಗಿದ ಕಳ್ಳರು ಬಳಿಕ ಹೆಂಚನ್ನು ಹಾಗೇ ಇಟ್ಟು ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದಾರೆ. ಮನೆ ಉಜಿರೆ-ಗುರಿಪಳ್ಳ ರಸ್ತೆ ಬದಿಯಲ್ಲೇ ಇದ್ದು, ಜನ, ವಾಹನ ಓಡಾಟವಿದ್ದರೂ ಹಾಡಹಗಲೇ ಕಳ್ಳತನ ನಡೆದಿದೆ. ಬೆಳ್ತಂಗಡಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆ ಆರಂಭಿಸಿದ್ದಾರೆ.