ಮೂಲ್ಕಿ ಕವತ್ತಾರು ಬಳಿ ಶನಿವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಮಯ ಹಿಂಬಾಗಿಲು ಮುರಿದು ಒಳಹೊಕ್ಕ ಕಳ್ಳರು ಕಬ್ಬಿಣದ ಕಪಾಟಲ್ಲಿರಿಸಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.
ಮೂಲ್ಕಿ: ಮೂಲ್ಕಿ ಕವತ್ತಾರು ಬಳಿ ಶನಿವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಮಯ ಹಿಂಬಾಗಿಲು ಮುರಿದು ಒಳಹೊಕ್ಕ ಕಳ್ಳರು ಕಬ್ಬಿಣದ ಕಪಾಟಲ್ಲಿರಿಸಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಕವತ್ತಾರು ಮುಖ್ಯರಸ್ತೆ ಬದಿಯಲ್ಲಿರುವ ಬಾಲಕೃಷ್ಣ ಶೆಟ್ಟಿಗಾರ್ ಎಂಬುವರ ಮನೆಯಲ್ಲಿ ಕಳ್ಳತನ ಸಂಭವಿಸಿದ್ದು 21 ಗ್ರಾಂ ಚಿನ್ನಾಭರಣಗಳನ್ನು ಕಳ್ಳರು ಕೊಂಡೊಯ್ದಿದ್ದಾರೆ.
ಮನೆಯಲ್ಲಿ ಬಾಲಕೃಷ್ಣ ಶೆಟ್ಟಿಗಾರ್ ಸಹಿತ ನಾಲ್ವರು ವಾಸವಿದ್ದು, ಅವರು ಹಾಗೂ ಮಗ ಮತ್ತು ಸೊಸೆ ಉದ್ಯೋಗ ನಿಮಿತ್ತ ಬೆಳಿಗ್ಗೆ ಮನೆಯಿಂದ ತೆರಳುತ್ತಾರೆ. ಶನಿವಾರ ಬೆಳಗ್ಗೆ ಮನೆಯೊಡತಿ ನಳಿನಾಕ್ಷಿಯವರು ಕಾಪು ಮಾರಿಗುಡಿಗೆ ತೆರಳಿದ್ದರು. ಅವರು ಮಧ್ಯಾಹ್ನ 2 ಗಂಟೆಗೆ ಮನೆಗೆ ವಾಪಾಸು ಬಂದಾಗ ಮನೆಯ ಹಿಂಬಾಗಿಲು ಮುರಿದು ಕಪಾಟು ತೆರೆದ ಸ್ಥಿತಿಯಲ್ಲಿ ಕಂಡುಬಂದಿತ್ತು. ಅವರು ಮನೆಯವರಿಗೆ ಮತ್ತು ಸಂಬಂಧಿಕರಿಗೆ ಕರೆ ಮಾಡಿ ಮಹಿತಿ ನೀಡಿದ್ದರು. ಅವರು ಬಂದು ಪರಿಸೀಲಿಸಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿತ್ತು.
ಬೆಡ್‌ರೂಮ್ ಕಪಾಟಿನಲ್ಲಿ ಇರಿಸಿದ್ದ ಬೀಗದಕೈ ಬಳಸಿ ಕಬ್ಬಿಣದ ಕಪಾಟು ತೆರೆದು ಅದರಲ್ಲಿದ್ದ 5 ಚಿನ್ನದ ಉಂಗುರ, ಒಂದು ಬ್ರಾಸ್‌ಲೈಟ್, ಒಂದು ಚೈನ್ ಕಳವುಗೈದಿದ್ದಾರೆ. ಕಳ್ಳರು ಮತ್ತೊಂದು ಬೆಡ್‌ರೂಮ್‌ಗೂ ಹೊಕ್ಕಿ ಅಲ್ಲಿದ್ದ ಕಪಾಟವನ್ನೂ ಜಾಲಾಡಿದ್ದಾರೆ.
ಮೂಲ್ಕಿ ಪೋಲಿಸರು ಆಗಮಿಸಿ ತನಿಖೆ ನಡೆಸಿದ್ದಾರೆ. ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಕೂಲಂಕುಶ ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳ ಘಟನಾ ಸ್ಥಳದಿಂದ 500 ಮೀಟರ್ ದೂರದ ಪಂಜಿನಡ್ಕ ಪೋಸ್ಟ್ ಆಫೀಸ್ ತನಕ ಹೋಗಿ ಸುತ್ತುವರಿದು ಹಿಂತಿರುಗಿದೆ.