ಉಡುಪಿಯಲ್ಲಿ ಕಾರ್ಮಿಕ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಪ್ರೊ. ಕೆ.ಫಣಿರಾಜ್​ ಮಾತನಾಡಿದರು. ಕೆ.ವಿಶ್ವನಾಥ್​, ಶಿವಾನಂದ್​, ಕಿರಣ್​ ಹೆಗ್ಡೆ, ನಾಗೇಶ್​ ಕಾಮತ್​, ಕವಿರಾಜ್​ ಎಸ್​. ಕಾಂಚನ್​ ಇತರರಿದ್ದರು. 
ಉಡುಪಿ

ಎಲ್ಲರಿಗೂ ಶ್ರಮ-ಪ್ರಜ್ಞೆ, ಹಕ್ಕಿನ ಅರಿವು ಅಗತ್ಯ

* ಪ್ರೊ. ಕೆ.ಫಣಿರಾಜ್​ ಅಭಿಪ್ರಾಯ

* ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ 

ಉಡುಪಿ: ಅನೇಕರ ತ್ಯಾಗ, ಬಲಿದಾನದ ಪರಿಣಾಮದಿಂದಾಗಿ ಇಂದು ಕೆಳವರ್ಗವದವರೂ ಸಹ ಬ್ಯಾಂಕ್​, ಎಲ್​ಐಸಿ, ಬಂದರುಗಳು ಸೇರಿದಂತೆ ವಿವಿಧೆಡೆ 'ವೈಟ್​ ಕಾಲರ್​ ಜಾಬ್​' ಮಾಡುವಂತಾಗಿದೆ. 1850ರಿಂದಲೇ ಕಾರ್ಮಿಕ ಹೋರಾಟಗಳು ಆರಂಭವಾಗಿದ್ದರೂ ಸಹ 1942ರಲ್ಲಿ ಬ್ರಿಟಿಷ್​ ವೈಸರಾಯ್​ನ ಕೌನ್ಸಿಲ್​ನಲ್ಲಿ ಡಾ. ಬಿ.ಆರ್​. ಅಂಬೇಡ್ಕರ್​ ಅವರು ಕಾರ್ಮಿಕ ಸಚಿವರಾದ ಬಳಿಕ ಕಾರ್ಮಿಕ ಕಾಯಿದೆಗಳು ಜಾರಿಗೊಂಡವು. ಎಲ್ಲ ಕಾರ್ಮಿಕರಿಗೂ ಸಹ ಶ್ರಮ, ಪ್ರಜ್ಞೆ ಹಾಗೂ ಹಕ್ಕಿನ ಅರಿವು ತಿಳಿದುಕೊಳ್ಳುವ ಅಗತ್ಯತೆ ಇದೆ ಎಂದು ಸಹಬಾಳ್ವೆ ಉಡುಪಿಯ ಸಂಚಾಲಕ ಪ್ರೊ. ಕೆ.ಫಣಿರಾಜ್​ ಹೇಳಿದರು.
ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ನಿಮಿತ್ತ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು)ಯ ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಡುಪಿಯ ಲಿಕೋ ಬ್ಯಾಂಕ್​ನ ವಜ್ರ ಮಹೋತ್ಸವದ ಸಭಾಂಗಣದಲ್ಲಿ ಶುಕ್ರವಾರ (ಮೇ 1)ಆಯೋಜಿಸಿದ್ದ 'ವಿಚಾರ ಸಂಕಿರಣ' ಉದ್ಘಾಟಿಸಿ ಮಾತನಾಡಿದರು.

8 ಕಾರ್ಮಿಕ ಕಾಯಿದೆಗಳು

ದಿನದಲ್ಲಿ 8 ಗಂಟೆಗಳ ಕೆಲಸ, ಶ್ರಮಕ್ಕೆ ತಕ್ಕ ವೇತನ, ಪ್ರತಿ ವರ್ಷದ ಹಣದುಬ್ಬರಕ್ಕೆ ಪ್ರತಿಯಾಗಿ ವೈಜ್ಞಾನಿಕವಾಗಿ ವೇತನ ಏರಿಕೆ, ಮಹಿಳೆಯರಿಗೆ ಹೆರಿಗೆ ಸಂದರ್ಭದಲ್ಲಿ 3 ತಿಂಗಳು ವೇತನ ಸಹಿತ ರಜೆ, ಕಾರ್ಮಿಕರ ಸಮುದಾಯಕ್ಕೆ ಮನೆ, ಆಹಾರ ಹೀಗೆ 8 ಬಗೆಯ ಕಾರ್ಮಿಕ ಕಾಯಿದೆಯನ್ನು ಸ್ವಾತಂತ್ರ್ಯ ಪೂರ್ವದಲ್ಲಿಯೇ ಹಕ್ಕಾಗಿ ನೀಡಲಾಗಿತ್ತು. ಸ್ವಾತಂತ್ರ್ಯದ ನಂತರ ಇದೇ ಅಂಶಗಳನ್ನು ಡಾ. ಅಂಬೇಡ್ಕರರು ಸಾಂವಿಧಾನಿಕ ಕಾನೂನುಗಳ ಅಡಿಯಲ್ಲಿ ಈ ಹಕ್ಕು ನೀಡಿದರು. ಇಂದು ವೈಜ್ಞಾನಿಕವಾಗಿ ಪ್ರತಿ ಕಾರ್ಮಿಕನಿಗೂ ಕನಿಷ್ಠ 31 ಸಾವಿರ ರೂ. ವೇತನ ನೀಡಬೇಕಿದೆ. ಈ ಎಲ್ಲ ಹಕ್ಕುಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಗಳು ಕಾರ್ಮಿಕರಿಗೆ ಲಭಿಸುವಂತೆ ನೋಡಿಕೊಳ್ಳಬೇಕು ಎಂದು ಫಣಿರಾಜ್​ ಹೇಳಿದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ವಿಚಾರ ಮಂಡಿಸಿದರು. ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ವಿಶ್ವನಾಥ್​ ಅಧ್ಯಕ್ಷತೆ ವಹಿಸಿದ್ದರು. ಎಐಟಿಯುಸಿಯ ಶಿವಾನಂದ್​, ಇಂಟಕ್​ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಕಿರಣ್​ ಹೆಗ್ಡೆ, ಬ್ಯಾಂಕ್​ ಯೂನಿಯನ್​ನ ಜಿಲ್ಲಾ ಕಾರ್ಯದರ್ಶಿ ನಾಗೇಶ್​ ಕಾಮತ್​ ಉಪಸ್ಥಿತರಿದ್ದರು.
ಜೆಸಿಟಿಯು ಉಡುಪಿ ಜಿಲ್ಲಾ ಸಂಚಾಲಕ ಕವಿರಾಜ್​ ಎಸ್​. ಕಾಂಚನ್​ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಜಿಲ್ಲಾ ಕಟ್ಟಡ ಸಂಘದ ಮುಖಂಡ ಸೈಯದ್​ ಅಲಿ ವಂದಿಸಿದರು.

ನಗರದಲ್ಲಿ ಮೆರವಣಿಗೆ

ಕಾರ್ಮಿಕ ದಿನಾಚರಣೆ ನಿಮಿತ್ತ ಉಡುಪಿ ಬಸ್​ ನಿಲ್ದಾಣ ಸಮೀಪದ ಸಿಐಟಿಯು ಕಚೇರಿಯಿಂದ ಕಾರ್ಮಿಕರು ಮೆರವಣಿಗೆ ನಡೆಸಿದರು. ಕಾರ್ಮಿಕ ಸಂಹಿತೆ ರದ್ದು ಮಾಡುವಂತೆ, 8 ಗಂಟೆಗಳ ದುಡಿಮೆ ಮರು ಆರಂಭಿಸುವಂತೆ, ಕಾರ್ಮಿಕ ಕಾನೂನುಗಳನ್ನು ರಕ್ಷಿಸುವಂತೆ, ಕನಿಷ್ಠ ಕೂಲಿ, ಪಿಂಚಣಿ ಹಾಗೂ ಸಾಮಾಜಿಕ ಭದ್ರತೆ ನೀಡುವಂತೆ ಘೋಷಣೆ ಕೂಗುತ್ತ ಸಾಗಿದರು.