ಉಡುಪಿಯಲ್ಲಿ ಆಯೋಜಿಸಿದ್ದ 111 ತರಬೇತಿ ಸರಣಿ ಕಾರ್ಯಕ್ರಮದಲ್ಲಿ ಜೆಸಿಐ ಉಡುಪಿ ಸಿಟಿಯ ಗೃಹ ಪತ್ರಿಕೆ ಬಿಡುಗಡೆ ಮಾಡಲಾಯಿತು. ಸಂತೋಷ್​ ಶೆಟ್ಟಿ, ಫಾ. ವಿಜಯ್​ ಜಾಯ್ಸನ್​ ಡಿಸೋಜಾ, ಪಲ್ಲವಿ ಕೊಡಗು, ದೀಪಕ್​ ರಾಜ್​, ಡಾ. ಹರಿಣಾಕ್ಷಿ ಕರ್ಕೇರ, ಬಾಸುಮ ಕೊಡಗು, ಸಮೀಯಾ ಹೆಗ್ಡೆ ಇತರರಿದ್ದರು. 
ಉಡುಪಿ

ಜೆಸಿಐನಿಂದ ಜೀವನದಲ್ಲಿ ಅಪರಮಿತ ಅವಕಾಶ

* ವಲಯಾಧ್ಯಕ್ಷ ಸಂತೋಷ್​ ಶೆಟ್ಟಿ ಅಭಿಪ್ರಾಯ

* ಒಂದೇ ದಿನ 111 ತರಬೇತಿ ಸರಣಿ ಉದ್ಘಾಟನೆ

ಉಡುಪಿ: ಪಠ್ಯ ಶಿಕ್ಷಣಕ್ಕಿಂತ ಭಿನ್ನವಾದ ಹಾಗೂ ವಿಶಿಷ್ಟ ತರಬೇತಿಯನ್ನು ಜೆಸಿ ಸಂಸ್ಥೆಯ ಮೂಲಕ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. 18 ವರ್ಷವಾದ ಬಳಿಕ ಜೆಸಿ ಸಂಸ್ಥೆಗೆ ಸೇರಿಕೊಂಡರೆ ಜೀವನದಲ್ಲಿ ಅಪರಮಿತ ಅವಕಾಶ ಲಭಿಸಲಿದೆ. ಅಲ್ಲದೆ, ಅನೇಕ ವ್ಯಕ್ತಿತ್ವ ವಿಕಸನಗಳ ಲಾಭಗಳನ್ನೂ ಪಡೆಯಬಹುದು ಎಂದು ಜೆಸಿಐ ವಲಯ 15ರ ಅಧ್ಯಕ್ಷ ಸಂತೋಷ್​ ಶೆಟ್ಟಿ ಅಭಿಪ್ರಾಯಪಟ್ಟರು.
ಉಡುಪಿಯ ಸೈಂಟ್​ ಮೇರಿಸ್​ ಇಂಗ್ಲಿಷ್​ ಮಾಧ್ಯಮ ಶಾಲೆಯಲ್ಲಿ ಜೆಸಿ ವಲಯ 15ರ ಘಟಕಗಳಲ್ಲಿ ಒಂದಾದ ಜೆಸಿಐ ಉಡುಪಿ ಸಿಟಿ ವತಿಯಿಂದ ಆಯೋಜಿಸಿದ್ದ ಒಂದೇ ದಿನ 111 ತರಬೇತಿ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ರೀತಿಯ ತರಬೇತಿ ಕಾರ್ಯಕ್ರಮಗಳ ಸರಣಿ ನಮ್ಮ ವಲಯದಲ್ಲಿ ಮೈಲಿಗಲ್ಲು ಆಗಿದೆ ಎಂದರು. 
ಶಾಲೆಯ ಪ್ರಾಂಶುಪಾಲ ಫಾ. ವಿಜಯ್​ ಜಾಯ್ಸನ್​ ಡಿಸೋಜಾ, ಮಾತನಾಡಿ, ವಿದ್ಯಾರ್ಥಿಗಳು ಪಾಠ ಮಾತ್ರವಲ್ಲದೆ ಜೀವನದ ಮೌಲ್ಯವನ್ನೂ ಕಲಿಯಬೇಕು. ಇಂತಹ ತರಬೇತಿಗಳು ನಿಮ್ಮ ಬದುಕು ರೂಪಿಸಲು ಸಹಕಾರಿ ಎಂದರು.
ವಲಯ ತರಬೇತಿ ವಿಭಾಗದ ನಿರ್ದೇಶಕ ದೀಪಕ್​ ರಾಜ್​, ವಲಯ ಉಪಾಧ್ಯಕ್ಷೆ ಡಾ. ಹರಿಣಾಕ್ಷಿ ಕರ್ಕೇರ ಮಾತನಾಡಿದರು.

ಪ್ರಶಸ್ತಿ ಪ್ರದಾನ

ಪ್ರಗತಿಪರ ಮಟ್ಟು ಗುಳ್ಳ ಕೃಷಿಕ ಹರೀಶ್​ ಅವರಿಗೆ 'ಸಲ್ಯೂಟ್​ ಟು ದ ಸೈಲೆಂಟ್​ ಸ್ಟಾರ್​' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಕಳ ಅಶೋಕ್​ ರಾವ್​ ಚಾರಿಟೇಬಲ್​ ಟ್ರಸ್ಟ್​ನ ದಿನೇಶ್​ ರಾವ್​ ಅವರನ್ನು ಗೌರವಿಸಲಾಯಿತು. ಜೆಸಿ ಕುರಿತು ಮಾಹಿತಿ ಒಳಗೊಂಡ ಕರಪತ್ರ ಮತ್ತು ಜೆಸಿಐ ಉಡುಪಿ ಸಿಟಿಯ ಗೃಹ ಪತ್ರಿಕೆ 'ಉಡುಪಿ ಸಿಟಿ ವೇವ್ಸ್​' ಬಿಡುಗಡೆ ಮಾಡಲಾಯಿತು.
ಜೆಸಿ ಉಡುಪಿ ಸಿಟಿ ಘಟಕದ ಅಧ್ಯಕ್ಷೆ ಪಲ್ಲವಿ ಕೊಡಗು ಅಧ್ಯಕ್ಷತೆ ವಹಿಸಿದ್ದರು. ತರಬೇತಿ ಸರಣಿಯ ನಿರ್ದೇಶಕ ಬಾಸುಮ ಕೊಡಗು, ಘಟಕದ ಕಾರ್ಯದರ್ಶಿ ಸಮೀಯಾ ಹೆಗ್ಡೆ ಉಪಸ್ಥಿತರಿದ್ದರು.
ಒಂದೇ ದಿನ 12 ಶಾಲೆಗಳಲ್ಲಿ 64ಕ್ಕೂ ಹೆಚ್ಚು ಜೆಸಿ ತರಬೇತುದಾರರಿಂದ ಒಟ್ಟು 111 ತರಬೇತಿ  ನಡೆಸಲಾಯಿತು. 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ತರಬೇತಿಯ ಪ್ರಯೋಜನ ಪಡೆದರು.