ಬೈಲೂರಿನ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಆಯೋಜಿಸಿದ್ದ 'ಹಸಿರು ನನ್ನೂರು ಬೈಲೂರು' ಚಿತ್ರಕಲಾ ಸ್ಪರ್ಧೆಯನ್ನು ಜಯಕರ್ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿದರು. ಡಾ. ಶ್ರದ್ಧಾ ಶೆಟ್ಟಿ, ಡಾ. ಎಂ.ಸಿ. ರೆಡ್ಡಪ್ಪ, ಮೋಹನ್ ಮುದ್ದಣ್ಣ ಶೆಟ್ಟಿ, ಸತೀಶ್ ರಾವ್, ಪ್ರಭಾಕರ್ ಭಂಡಾರಿ, ಪ್ರವಿಣಕುಮಾರ್ ಇದ್ದರು.
* ಜಯಕರ್ ಶೆಟ್ಟಿ ಇಂದ್ರಾಳಿ ಅಭಿಪ್ರಾಯ
* ಬೈಲೂರಿನಲ್ಲಿ ಚಿತ್ರಕಲಾ ಸ್ಪರ್ಧೆ ಉದ್ಘಾಟನೆ
ಉಡುಪಿ: ಪ್ರಕೃತಿಯಿಂದ ನಮಗೆ ಬೆಳಕು, ಗಾಳಿ, ನೀರು ಸೇರಿದಂತೆ ಅಗತ್ಯವಿರುವ ಎಲ್ಲವೂ ಲಭಿಸುತ್ತದೆ. ಅದಕ್ಕೆ ಪ್ರತಿಯಾಗಿ ನಾವು ಗಿಡಗಳನ್ನು ನೆಟ್ಟು ಬೆಳೆಸಿ ಪರಿಸರವನ್ನು ಸ್ವಚ್ಛ ಮತ್ತು ಸುಂದರವಾಗಿ ಇಟ್ಟುಕೊಳ್ಳಬೇಕಿದೆ. ಈ ವಿಚಾರದಲ್ಲಿ ಮೊದಲು ನಾವು ಬದಲಾಗಬೇಕು. ಯುವಜನತೆ ತಮ್ಮ ಮನೆಗಳ ಆವರಣ ಪ್ಲಾಸ್ಟಿಕ್ ಮುಕ್ತಗೊಳಿಸಬೇಕು. ಪ್ರಕೃತಿ ಸ್ವಚ್ಛವಾಗಿದ್ದಲ್ಲಿ ನೆಮ್ಮದಿಯ ಬದುಕು ನಡೆಸಲು ಸಾಧ್ಯ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹಾಗೂ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಅಭಿಪ್ರಾಯಪಟ್ಟರು.
ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಪರಿಸರ ಪ್ರೇಮಿಗಳು ಬೈಲೂರು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಡುಪಿ, ಕಲಾ ಕಿರಣ ಕ್ಲಬ್ ಬೈಲೂರು, ಶ್ರೀ ಮಹಿಷಮರ್ಧಿನಿ ದೇವಸ್ಥಾನ ಬೈಲೂರು ಇವುಗಳ ಸಹಭಾಗಿತ್ವದಲ್ಲಿ ದೇವಸ್ಥಾನದ ಸಭಾಂಗಣದಲ್ಲಿ ರವಿವಾರ (ಜೂ.7) ಆಯೋಜಿಸಿದ್ದ 'ಹಸಿರು ನನ್ನೂರು ಬೈಲೂರು' ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಡಾ.ಯು.ಕೃಷ್ಣ ಮುನಿಯಾಲ್ ಮೆಮೋರಿಯಲ್ ಟ್ರಸ್ಟ್ನ ಟ್ರಸ್ಟಿ ಡಾ. ಶ್ರದ್ಧಾ ಶೆಟ್ಟಿ ಮಾತನಾಡಿದರು.
ಉಡುಪಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆಯ ಉಪ ನಿರ್ದೇಶಕ ಡಾ. ಎಂ.ಸಿ. ರೆಡ್ಡಪ್ಪ, ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ್ ಮುದ್ದಣ್ಣ ಶೆಟ್ಟಿ, ಎಸ್ವಿಸಿ ಬ್ಯಾಂಕ್ನ ನಿರ್ದೇಶಕ ಸತೀಶ್ ರಾವ್, ಕಲಾ ಕಿರಣ ಕ್ಲಬ್ನ ಮಾಜಿ ಅಧ್ಯಕ್ಷ ಪ್ರಭಾಕರ್ ಭಂಡಾರಿ ಉಪಸ್ಥಿತರಿದ್ದರು.
ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಡಗಬೆಟ್ಟು ಸೊಸೈಟಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವಿಣಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.