ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯಕುಮಾರ್ ಸೊರಕೆ.
ಅಜ್ಜರಕಾಡು ಪುರಭವನದಲ್ಲಿ ಕಾರ್ಯಕ್ರಮ ಆಯೋಜನೆ
ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಆಶ್ರಯದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಹಕಾರದಲ್ಲಿ ಡಿ.2ರಂದು ಬೆಳಗ್ಗೆ 10:30ಕ್ಕೆ ಅಜ್ಜರಕಾಡು ಪುರಭವನದಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯಕುಮಾರ್ ಸೊರಕೆ ಮಾಹಿತಿ ನೀಡಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಶನಿವಾರ (ನ.29) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದ 100ರ ಸಂಭ್ರಮದ ಸ್ಮರಣಾರ್ಥ ಜಿಲ್ಲಾ ಪ್ರಚಾರ ಸಮಿತಿಗಳ ಆಶ್ರಯದಲ್ಲಿ ಆಯಾ ಜಿಲ್ಲೆಗಳಲ್ಲಿ ನಡೆಯಲಿದೆ. ಡಿಸೆಂಬರ್ ತಿಂಗಳ ಕೊನೆಯವರೆಗೂ ರಾಜ್ಯದ ಎಲ್ಲ 35 ಜಿಲ್ಲೆಗಳಲ್ಲೂ ಈ ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದರು.
ಒಂದು ದಿನದ ತರಬೇತಿ
ಗಾಂಧೀಜಿ, ಅಂಬೇಡ್ಕರ್ರ ತತ್ವ ಸಿದ್ಧಾಂತದ ಕುರಿತು ಹಾಗೂ ಕೇಂದ್ರದ ಬಿಜಿಪಿ ಸರ್ಕಾರವು ಚುನಾವಣಾ ಆಯೋಗದ ಸಹಕಾರದಿಂದ ನಡೆಸುತ್ತಿರುವ ವೋಟ್ ಚೋರಿ ಕುರಿತಾಗಿಯೂ ಇನ್ನಷ್ಟು ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶ. ರಾಜ್ಯದ 59 ಸಾವಿರ ಬೂತ್ಗಳಲ್ಲಿ ತಲಾ ಇಬ್ಬರಂತೆ 1.18 ಲಕ್ಷ ಪ್ರತಿನಿಧಿಗಳನ್ನು ಆಯ್ಕೆ ಮಾಡಿ, ಅವರಿಗೆ ಒಂದು ದಿನದ ತರಬೇತಿಯನ್ನೂ ನೀಡಲಾಗುವುದು ಎಂದು ಸೊರಕೆ ತಿಳಿಸಿದರು.
ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಅಲೆವೂರು ಹರೀಶ್ ಕಿಣಿ ಮಾತನಾಡಿ, ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿಯ ರಾಜ್ಯ ಉಪಾಧ್ಯಕ್ಷ ಕಿಮ್ಮನೆ ರತ್ನಾಕರ್, ಪ್ರಚಾರ ಸಮಿತಿಯ ಉಪಾಧ್ಯಕ್ಷ ಮುನೀರ್ ಜನ್ಸಾಲೆ, ಕೆಪಿಸಿಸಿ ವಕ್ತಾರ ಸುಧೀರ್ ಮರೋಳಿ, ಮುಖ್ಯ ಸಂಯೋಜಕ ಹಾಗೂ ಚಲನಚಿತ್ರ ನಿರ್ದೇಶಕ ಎಸ್. ನಾರಾಯಣ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ ಮುದ್ರಾಡಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಶೋಕಕುಮಾರ್ ಕೊಡವೂರು, ಕೆಪಿಸಿಸಿ ವಕ್ತಾರ ಸುಧೀರ್ ಮರೋಳಿ ಸೇರಿದಂತೆ ಎಲ್ಲ ಸಮಿತಿಯ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದು, ಸಮಾವೇಶದಲ್ಲಿ 1,500ರಷ್ಟು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಚಾರ ಸಮಿತಿಯ ಕಾಪು ಬ್ಲಾಕ್ ಅಧ್ಯಕ್ಷ ಅಖಿಲೇಶ್ ಕೋಟ್ಯಾನ್, ಉಡುಪಿ ಬ್ಲಾಕ್ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಬ್ರಹ್ಮಾವರ ಬ್ಲಾಕ್ ಅಧ್ಯಕ್ಷ ರಾಜೇಶ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ದಿನಕರ ಶೆಟ್ಟಿ ಉಪಸ್ಥಿತರಿದ್ದರು.