ಮಲ್ಪೆಯಲ್ಲಿ ಹಲಸು-ಮಾವು- ಮೇಳ, ಕರಕುಶಲವಸ್ತುಗಳ ಪ್ರದರ್ಶನಕ್ಕೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತಿರ್ಥ ಶ್ರೀಪಾದರು ಚಾಲನೆ ನೀಡಿದರು.
ಉಡುಪಿ: ಆಚಾರ್ಯ ಮಧ್ವರಿಗೆ ಕೃಷ್ಣನೊಲಿದ ಪುಣ್ಯಭೂಮಿ ಮಲ್ಪೆ. ಕಡಲತೀರದ ಆನಂದ ಶರಧಿ ಜಾಗದಲ್ಲಿ ಮುಂದಿನ ದಿನಗಳಲ್ಲಿ ಕೃಷ್ಣನ ಸ್ಮರಣೆ ಮತ್ತು ಮಧ್ವರ ತತ್ವ ಪ್ರಚಾರ ಕಾರ್ಯ ನಡೆಯಲಿದೆ ಎಂದು ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದರು.
ಮಲ್ಪೆ ಶ್ರೀಕೃಷ್ಣ ಪರಿಸರ ಪ್ರತಿಷ್ಠಾನ ಆಶ್ರಯದಲ್ಲಿ ಮಲ್ಪೆ ಕಡಲತೀರದ ಮುಖ್ಯದ್ವಾರದ ಬಳಿ ಆನಂದ ಶರಧಿ ನಿವೇಶನದಲ್ಲಿ ಹಲಸು-ಮಾವು-ಮೇಳ, ಕರಕುಶಲವಸ್ತುಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಅಶೀರ್ವಚನ ನೀಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಹಲಸು ಮತ್ತು ಮಾವಿನ ಮರಕ್ಕೆ ವಿಶೇಷ ಪ್ರಾಶಸ್ತ್ಯವಿದೆ. ಯಾವುದೇ ಶುಭ ಕಾರ್ಯ ನಡೆಯಬೇಕಾದರೆ ಮಾವು ಮತ್ತು ಹಲಸಿನ ಚಿಗುರು ಅಗತ್ಯ. ಮಾವಿನ ತೋರಣ ಅವಶ್ಯ. ಹೀಗಾಗಿ ಪ್ರತಿಯೊಬ್ಬರೂ ಮನೆಯ ಸುತ್ತಮುತ್ತ ಮಾವು ಮತ್ತು ಹಲಸಿನ ಮರ ಬೆಳೆಯಬೇಕು. ಈ ನಿವೇಶನದಲ್ಲಿ ಮೊದಲ ಬಾರಿಗೆ ಮಾವು ಮತ್ತು ಹಲಸಿನ ಮೇಳ ಆಯೋಜಿಸಿರುವುದು ಮುಂದಿನ ಶುಭಕಾರ್ಯಗಳ ಸಂಕೇತವಾಗಿದೆ ಎಂದರು.
ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಾತನಾಡಿ, ಶುದ್ಧ ಸಂಕಲ್ಪಕ್ಕೆ ದೇವರು ಒಲಿಯುತ್ತಾನೆ. ಮಧ್ವ ಸಿದ್ಧಾಂತ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿದ್ದು, ಇದನ್ನು ಹೋಗಲಾಡಿಸುವ ಕೆಲಸ ಈ ನೆಲದಲ್ಲಿ ನಡೆಯಲಿದೆ. ಮಧ್ವಾಚಾರ್ಯರ ಮೂರ್ತಿಯನ್ನು ಸ್ಥಾಪಿಸುವ ಯೋಜನೆ ಇದೆ. ಮುಂದಿನ ದಿನಗಳಲ್ಲಿ ಈ ಕೇಂದ್ರ ಭಕ್ತಿ ಮತ್ತು ಧರ್ಮಜಾಗೃತಿ ತಾಣವಾಗಲಿದೆ. ಪ್ರತಿ ಮನೆ ಮತ್ತು ಮನಗಳಲ್ಲಿ ಕೃಷ್ಣನ ಪ್ರತಿಷ್ಠೆಯಾಗಬೇಕು. ಈ ನಿಟ್ಟಿನಲ್ಲಿ ಭಜನಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು.
ಪದ್ಮಶ್ರೀ ಪುರಸ್ಕೃತ ಕೃಷಿಕ ಸತ್ಯನಾರಾಯಣ ಬೆಳೇರಿ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕಿಶೋರ್ ಡಿ. ಸುವರ್ಣ, ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷೆ ಬೇಬಿ ಎಸ್. ಸಾಲ್ಯಾನ್, ಉದ್ಯಮಿ ಸಾಧು ಸಾಲ್ಯಾನ್, ಪ್ರತಿಷ್ಠಾನ ಕಾರ್ಯದರ್ಶಿ ರತ್ನಕುಮಾರ್, ನೇಕಾರರ ಸಂದ ಅಧ್ಯಕ್ಷ ರತ್ನಾಕರ ಇಂದ್ರಾಳಿ ಉಪಸ್ಥಿತರಿದ್ದರು. ವಿಜಯ ಕೊಡವೂರು ಸ್ವಾಗತಿಸಿದರು. ಷಣ್ಮುಖ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
"
ಮಧ್ವರ ಭಕ್ತಿಗೆ ಒಲಿದು ಮಲ್ಪೆಯಲ್ಲಿ ಕೃಷ್ಣ ದೊರಕಿದ್ದಾನೆ. ಸಾಗರದಲ್ಲಿ ಸಾಗುವ ಹಡಗುಗಳಿಗೆ ಮಲ್ಪೆ ದೀಪಸ್ಥಂಭ ದಾರಿದೀಪವಿದ್ದಂತೆ ಅದೇ ರೀತಿ ಸಂಸಾರ ಸಾಗರದಲ್ಲಿರುವವರಿಗೆ ಈ ಕ್ಷೇತ್ರ ಮಾರ್ಗದರ್ಶನ ಕೇಂದ್ರವಾಗಲಿದೆ.
— ಶ್ರೀ ವಿಶ್ವಪ್ರಸನ್ನ ತ ಶ್ರೀಪಾದರು, ಪೇಜಾವರ ಮಠ.