ವಾಹನ ಸಂಚಾರ ನಿರ್ಬಂಧಿಸಿರುವ ಅರಾಟೆ ಹಳೇ ಸೇತುವೆ.
ವಿಜಯವಾಣಿ ಸುದ್ದಿಜಾಲ ಕುಂದಾಪುರ
ರಾಷ್ಟ್ರೀಯ ಹೆದ್ದಾರಿ 66ರ ಸೌಪರ್ಣಿಕಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅರಾಟೆ ಹಳೆಯ ಸೇತುವೆ ದುರಸ್ತಿಗೆ ಸರ್ಕಾರ 85 ಕೋಟಿ ರೂ. ಬಿಡುಗಡೆ ಮಾಡಿ, ಕಾಮಗಾರಿ ಗುದ್ದಲಿ ಪೂಜೆ ನಡೆದು ಮೂರು ತಿಂಗಳು ಕಳೆಯುತ್ತಿದ್ದರೂ ಕಾಮಗಾರಿ ಪ್ರಾರಂಭವಾಗುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ.
ಸೇತುವೆ ಪಿಲ್ಲರ್‌ಗಳು ಉತ್ತಮ ಸ್ಥಿತಿಯಲ್ಲಿದ್ದು, ಮೇಲ್ಭಾಗದ ಕಾಂಕ್ರೀಟ್ ಹಾಸು ಮಾತ್ರ ಶಿಥಿಲಗೊಂಡಿದೆ ಎಂಬ ಕಾರಣದಿಂದ ಸೇತುವೆ ಪಿಲ್ಲರ್ ತೆಗೆಯದೆ, ಸೇತುವೆ ಮೇಲ್ಭಾಗದಲ್ಲಿನ ಕಾಂಕ್ರೀಟ್ ಹಾಸು ತೆಗೆದು ಸೇತುವೆ ದುರಸ್ತಿ ಮಾಡುವ ಯೋಜನೆ ಇದಾಗಿದೆ. ಪೂರ್ಣ ಕಾಮಗಾರಿಗೆ ಒಂದೂವರೆ ವರ್ಷದ ಅವಧಿಯನ್ನು ತಜ್ಞರು ತಿಳಿಸಿದ್ದು, ಕಳೆದ ಡಿ.20ರಂದು ಸೇತುವೆ ದುರಸ್ತಿ ಕಾಮಗಾರಿಗೆ ಸಂಸದ ಬಿ.ವೈ.ರಾಘವೇಂದ್ರ ಗುದ್ದಲಿಪೂಜೆ ನೆರವೇರಿಸಿದ್ದರು. ಆದರೆ ದುರಸ್ತಿಯ ಯಾವುದೇ ಲಕ್ಷಣ ಕಾಣುತ್ತಿಲ್ಲ. 2-3 ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗಲಿದ್ದು ದುರಸ್ತಿ ಕಾರ್ಯ ಕಷ್ಟ ಸಾಧ್ಯ.
ಹೆಚ್ಚಿದ ವಾಹನ ದಟ್ಟಣೆ
ಇನ್ನೇನು ಕಾಮಗಾರಿ ಆರಂಭವಾಗಿಯೇ ಬಿಟ್ಟಿತು ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಜನ, ದುರಸ್ತಿ ಕಾಮಗಾರಿ ಯಾವಾಗ ಪ್ರಾರಂಭ ಎಂದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ. 2024ರ ನ.25ರಿಂದ ಅರಾಟೆ ಹಳೇ ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಹೊಸ ಸೇತುವೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದರಿಂದ ಅರಾಟೆಯಿಂದ ಮೂವತ್ತುಮುಡಿ- ಕನ್ನಡಕುದ್ರುವಿನವರೆಗಿನ ರಾ.ಹೆ.66 ಅಪಘಾತ ವಲಯವಾಗಿ ಮಾರ್ಪಟ್ಟಿದ್ದು, ದಿನೇ ದಿನೆ ಅಪಘಾತಗಳ ಸಂಖ್ಯೆ, ವಾಹನ ದಟ್ಟಣೆ ಹೆಚ್ಚಾಗಿ ನಿರಂತರ ಟ್ರಾಫಿಕ್ ಜಾಮ್ ಆಗುತ್ತಿದೆ.
*ಹೊಸ ಸೇತುವೆಯಲ್ಲಿಲ್ಲ ಬೆಳಕಿನ ವ್ಯವಸ್ಥೆ: ಹೆದ್ದಾರಿಯ ಒಂದೇ ಮಾರ್ಗದಲ್ಲಿ ಎರಡೂ ಕಡೆಗಳ ವಾಹನಗಳನ್ನು ಬಿಡಲಾಗುತ್ತಿದೆ. ಹೊಸ ಸೇತುವೆ ವಿಭಾಗಿಸಿ ಕೋನುಗಳನ್ನು ಹಾಕಲಾಗಿದ್ದು, ವಾಹನಗಳು ತಾಗಿ ಹಾಳಾಗಿವೆ. ಇನ್ನು ಸಿಗ್ನಲ್ ಲೈಟ್, ಅಲ್ಲಲ್ಲಿ ಹಂಪ್ ಹಾಕಲಾಗಿದ್ದು, ಬೇರೆ ಏನೂ ಮಾಡಿಲ್ಲ. ಹೊಸ ಸೇತುವೆಯಲ್ಲಿ ಬೆಳಕಿನ ವ್ಯವಸ್ಥೆಯಿಲ್ಲ. ಮೂವತ್ತುಮುಡಿ ಹಾಗೂ ಅರಾಟೆ ಎರಡೂ ಕಡೆ ಡೈವರ್ಶನ್ ತೆಗೆದುಕೊಳ್ಳುವಲ್ಲಿಯೂ ಸರಿಯಾದ ಬೆಳಕಿನ ವ್ಯವಸ್ಥೆಯಿಲ್ಲ.
ಶಿಥಿಲಗೊಂಡು 58 ವರ್ಷ ಹಳೆಯದಾದ ಸೇತುವೆ ದುರಸ್ತಿ ಕಾಮಗಾರಿ ಆದಷ್ಟು ಶೀಘ್ರ ಪ್ರಾರಂಭಿಸಬೇಕು ಮತ್ತು ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಅರಾಟೆ ಹಳೇ ಸೇತುವೆ ಸಂಚಾರಮುಕ್ತಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟ್ರಾಫಿಕ್ ಜಾಮ್ ಕಾಯಂ
ಬೇಸಿಗೆ ರಜೆ ಆರಂಭಗೊಂಡಿದ್ದು, ಬೇರೆ ಬೇರೆ ಜಿಲ್ಲೆಗಳಿಂದ ಕರಾವಳಿ ಭಾಗಕ್ಕೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ. ಮರವಂತೆ, ಕೊಲ್ಲೂರು, ಒತ್ತಿನೆಣೆ, ಮುರ್ಡೇಶ್ವರ, ಉಡುಪಿ ಕಡೆಗೆ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ದಟ್ಟಣೆ, ಮುಂಬೈ, ಬೆಂಗಳೂರು ಮತ್ತಿತರ ಕಡೆಗಳಲ್ಲಿ ನೆಲೆಸಿರುವ ಜನ ಊರಿಗೆ ಬೇಸಿಗೆ ರಜೆಯಲ್ಲಿ ಬರುವುದರಿಂದ ವಾಹನ ದಟ್ಟಣೆ ಹೆಚ್ಚಿರುತ್ತದೆ. ಹಾಗಾಗಿ ಇಲ್ಲಿ ಇನ್ನು 2 ತಿಂಗಳು ನಿರಂತರ ಟ್ರಾಫಿಕ್ ಜಾಮ್ ಕಾಯಂ ಎನ್ನುವಂತಾಗಲಿದೆ.
ರಾ.ಹೆ.66ರ ಸೌಪರ್ಣಿಕಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅರಾಟೆ ಹಳೆಯ ಸೇತುವೆ ದುರಸ್ತಿಗೆ ಗುದ್ದಲಿ ಪೂಜೆ ನಡೆದು ಮೂರು ತಿಂಗಳಾದರೂ ಕಾಮಗಾರಿ ಪ್ರಾರಂಭಿಸಿಲ್ಲ. ಅವಿಭಜಿತ ದ.ಕ. ಮತ್ತು ಗೋವಾ, ಮಹಾರಾಷ್ಟ್ರ ಸಂಪರ್ಕಿಸುವ ರಾ.ಹೆ.66ರಲ್ಲಿ ಪ್ರತಿನಿತ್ಯ ಸರಕು ಸಾಗಾಟ ವಾಹನಗಳು, ಬಸ್‌ಗಳು, ಭಾರಿ ಮತ್ತು ಲಘು ವಾಹನಗಳು ನಿರಂತರವಾಗಿ ಸಂಚರಿಸುತ್ತಿದ್ದು, ಹೊಸ ಸೇತುವೆಯಲ್ಲಿ ಒತ್ತಡ ಸೃಷ್ಟಿಯಾಗಿದೆ. ಸೇತುವೆ ದುರಸ್ತಿ ಕಾಮಗಾರಿ ಆದಷ್ಟು ಶೀಘ್ರ ಪ್ರಾರಂಭಿಸಬೇಕು ಮತ್ತು ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಸೇತುವೆ ಸಂಚಾರಕ್ಕೆ ಮುಕ್ತವನ್ನಾಗಿಸಬೇಕು.