ವಿಜಯವಾಣಿ ಸುದ್ದಿಜಾಲ ಹೆಬ್ರಿ
ಪರಿಸರದ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ಪತಂಗಗಳ ಮಹತ್ವವನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ ಕೊನೆಯ ಪೂರ್ಣ ವಾರವನ್ನು ‘ರಾಷ್ಟ್ರೀಯ ಪತಂಗಗಳ ವಾರ’ ಎಂದು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಇದು ಪತಂಗಗಳ ಸಂರಕ್ಷಣೆ, ವೈಜ್ಞಾನಿಕ ಅಧ್ಯಯನ ಮತ್ತು ಜೀವವೈವಿಧ್ಯದ ಕುರಿತು ಜಾಗೃತಿ ಮೂಡಿಸುವ ಅಂತಾರಾಷ್ಟ್ರೀಯ ನಾಗರಿಕ ವಿಜ್ಞಾನ ಅಭಿಯಾನವಾಗಿದೆ.
ಪತಂಗಗಳು, ಚಿಟ್ಟೆಗಳು ವಿಶ್ವದಲ್ಲಿ ಸುವಾರು 1.6 ಲಕ್ಷಕ್ಕೂ ಹೆಚ್ಚು ಜಾತಿಗಳಲ್ಲಿ ಗುರುತಿಸಲ್ಪಟ್ಟಿವೆ. ಭಾರತದಲ್ಲಿಯೂ ಸಾವಿರಾರು ಪ್ರಭೇದಗಳು ಕಂಡುಬರುತ್ತವೆ. ಜುಲೈನಲ್ಲಿ ಪತಂಗಗಳ ಚಟುವಟಿಕೆ ಹೆಚ್ಚಿರುವುದರಿಂದ ಅವುಗಳನ್ನು ವೀಕ್ಷಿಸಲು, ಅವುಗಳ ವೈವಿಧ್ಯವನ್ನು ತಿಳಿದುಕೊಳ್ಳಲು ಹಾಗೂ ದಾಖಲಿಸಲು ಈ ಅವಧಿಗೆ ವಿಶೇಷ ಮಹತ್ವವಿದೆ.
ರಾಷ್ಟ್ರೀಯ ಪತಂಗಗಳ ವಾರದ ಅಂಗವಾಗಿ ಪ್ರಕೃತಿ ಪ್ರಿಯರು, ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಛಾಯಾಗ್ರಾಹಕರು ರಾತ್ರಿ ವೇಳೆಯಲ್ಲಿ ಪತಂಗಗಳನ್ನು ವೀಕ್ಷಿಸಿ, ಛಾಯಾಚಿತ್ರಗಳನ್ನು ಸೆರೆಹಿಡಿದು, ಅವುಗಳ ಜಾತಿಯನ್ನು ಗುರುತಿಸಿ ವೈಜ್ಞಾನಿಕ ದಾಖಲೆಗಳಿಗೆ ವಾಹಿತಿ ಒದಗಿಸುತ್ತಾರೆ. ಈ ವಾಹಿತಿ ಪತಂಗಗಳ ವೈವಿಧ್ಯ, ವಿಸ್ತರಣೆ ಹಾಗೂ ಪರಿಸರದಲ್ಲಾಗುತ್ತಿರುವ ಬದಲಾವಣೆಗಳನ್ನು ಅಧ್ಯಯನ ವಾಡಲು ನೆರವಾಗುತ್ತದೆ.
ಆಹಾರ ಸರಪಳಿಯ ಕೊಂಡಿ
ಪತಂಗಗಳು ಪರಿಸರದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಅನೇಕ ಸಸ್ಯಗಳ ಪರಾಗ ಸ್ಪರ್ಶದಲ್ಲಿ ಅವುಗಳು ಸಹಕರಿಸುತ್ತವೆ. ಜತೆಗೆ ಪಕ್ಷಿಗಳು, ಬಾವಲಿಗಳು, ಕಪ್ಪೆಗಳು ಹಾಗೂ ಇತರ ಜೀವಿಗಳಿಗೆ ಆಹಾರವಾಗುವ ಮೂಲಕ ಆಹಾರ ಸರಪಳಿಯ ಪ್ರಮುಖ ಕೊಂಡಿಯಾಗಿವೆ. ಪತಂಗಗಳ ಸಂಖ್ಯೆಯಲ್ಲಿ ಆಗುವ ಕುಸಿತವು ಪರಿಸರ ವಾಲಿನ್ಯ, ಕೀಟನಾಶಕಗಳ ಅತಿಯಾದ ಬಳಕೆ ಮತ್ತು ಅರಣ್ಯ ನಾಶದಂತಹ ಸಮಸ್ಯೆಗಳ ಸೂಚಕವಾಗಿರುವುದರಿಂದ ಅವುಗಳನ್ನು ಜೈವಸೂಚಕಗಳಾಗಿಯೂ ಪರಿಗಣಿಸಲಾಗುತ್ತದೆ.
ಪಶ್ಚಿಮಟ್ಟ ಪ್ರದೇಶಗಳಲ್ಲಿ ಹೆಸರುವಾಸಿ
ಕರ್ನಾಟಕದ ಪಶ್ಚಿಮಟ್ಟ ಪ್ರದೇಶಗಳು ಪತಂಗಗಳ ವೈವಿಧ್ಯಕ್ಕೆ ಹೆಸರುವಾಸಿಯಾಗಿವೆ. ತಜ್ಞರ ಪ್ರಕಾರ ಪತಂಗಗಳನ್ನು ಸಂರಕ್ಷಿಸುವುದು ಎಂದರೆ ಕೇವಲ ಒಂದು ಕೀಟವನ್ನು ಉಳಿಸುವುದಲ್ಲ, ಇಡೀ ಪರಿಸರ ವ್ಯವಸ್ಥೆಯನ್ನು ರಕ್ಷಿಸುವ ಕಾರ್ಯ. ಶಾಲಾ ಕಾಲೇಜುಗಳಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮಗಳು, ಪ್ರಕೃತಿ ನಡಿಗೆ, ಪತಂಗ ವೀಕ್ಷಣೆ ಮತ್ತು ಛಾಯಾಗ್ರಹಣ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಪ್ರಕೃತಿ ಪ್ರೇಮ ಹಾಗೂ ಜೀವವೈವಿಧ್ಯ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಪರಿಸರ ವಾಲಿನ್ಯ, ಬೆಳಕಿನ ವಾಲಿನ್ಯ ಹಾಗೂ ಅರಣ್ಯ ನಾಶದಿಂದ ಪತಂಗಗಳ ಸಂಖ್ಯೆ ಕಡಿಮೆಯಾಗುತ್ತಿದೆ.
ರಾಷ್ಟ್ರೀಯ ಪತಂಗಗಳ ವಾರವು ಪತಂಗಗಳನ್ನು ವೀಕ್ಷಿಸಲು, ದಾಖಲಿಸಲು ಹಾಗೂ ನಾಗರಿಕ ವಿಜ್ಞಾನ ಮೂಲಕ ಅವುಗಳ ಬಗ್ಗೆ ಜಾಗೃತಿ ಮೂಡಿಸಲು ಉತ್ತಮ ಅವಕಾಶವಾಗಿದೆ. ಮನೆ ಅಂಗಳ, ತೋಟ ಅಥವಾ ಬೆಳಕಿನ ಸುತ್ತ ಕಾಣುವ ಪತಂಗಗಳನ್ನು ಗಮನಿಸಿ ದಾಖಲಿಸುವುದರಿಂದ ಪ್ರಕೃತಿಯನ್ನು ಇನ್ನಷ್ಟು ಹತ್ತಿರದಿಂದ ಅರಿಯುವುದರ ಜತೆಗೆ ಅವುಗಳ ಸಂರಕ್ಷಣೆಗೂ ಪ್ರತಿಯೊಬ್ಬರೂ ಕೊಡುಗೆ ನೀಡಬಹುದು.
— ಅಕ್ಷರ್, ಆಗುಂಬೆ ಕಾನನ ಕನ್ಸರ್ವೇಶನ್