ಉಡುಪಿ: ಹಿರಿಯ ನಾಗರಿಕರ ಸೇವೆ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಬೇಕಾಗಿದೆ. ವಯಸ್ಸಾಗಿದೆ ನಾವು ಅಪ್ರಯೋಜಕರು ಎಂದು ತಿಳಿದುಕೊಳ್ಳದೆ ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜದಲ್ಲಿ ವಿಶೇಷ ಸ್ಥಾನ-ಮಾನ ಹೊಂದಿರುವ ಅವರನ್ನು ಗೌರವಯುತವಾಗಿ ನೋಡಿಕೊಳ್ಳಬೇಕು. ಅದು ಎಲ್ಲರ ಕರ್ತವ್ಯವಾಗಿದೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಅಭಿಮತ ವ್ಯಕ್ತಪಡಿಸಿದರು.
ಉಡುಪಿಯ ಬನ್ನಂಜೆಯಲ್ಲಿರುವ ಶ್ರೀ ನಾರಾಯಣಗುರು ಸಭಾಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕೆನರಾ ಬ್ಯಾಂಕ್, ವಿವಿಧ ಇಲಾಖೆ ಹಾಗೂ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಮತ್ತು ಕೇಂದ್ರ ಪ್ರಾಯೋಜಿತ ಅಟಲ್ ವಯೋ ಅಭ್ಯುದಯ ಯೋಜನೆಯ ಉಪ ಯೋಜನೆಯಡಿ ಗುರುವಾರ (ಅ.1) ಆಯೋಜಿಸಿದ್ದ ಅಂತರ್ ಪೀಳಿಗೆಯ ಬಾಂಧವ್ಯ ಮೇಳ ಉದ್ಘಾಟಿಸಿ ಮಾತನಾಡಿದರು.
ಹಿರಿಯರಿಗಾಗಿ ಪೊಲೀಸ್ ಬೀಟ್
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್ ಮಾತನಾಡಿ, ನಗರೀಕರಣದಿಂದಾಗಿ ಹಿರಿಯ ನಾಗರಿಕರು ಮಕ್ಕಳು, ಕುಟುಂಬ, ಬಂಧು=ಬಳಗವಿಲ್ಲದೆ ಒಂಟಿಯಾಗಿ ಬದುಕುತ್ತಿದ್ದಾರೆ. ಅವರಿಗೆ ಅಭದ್ರತೆ ಕಾಡುತ್ತಿದೆ. ಹೀಗಾಗಿ ಪೊಲೀಸ್ ಬೀಟ್ ನಡೆಸಿ ಹಿರಿಯ ನಾಗರಿಕರಿಗೆ ಏನಾದರೂ ಸಮಸ್ಯೆಗಳಿದ್ದಲ್ಲಿ ಇನ್ನಿತರ ಇಲಾಖೆಗಳ ಮೂಲಕ ಅದನ್ನು ಬಗೆಹರಿಸುವ ಕಾರ್ಯ ನಡೆಯುತ್ತಿದೆ ಎಂದರು.
ಇಂಚರ ಕ್ಲಿನಿಕ್ನ ಜನರಲ್ ಫಿಜೀಶಿಯನ್ ಡಾ. ವೈ.ಸುದರ್ಶನ್ ರಾವ್ ಉಪನ್ಯಾಸ ನೀಡಿದರು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ನಾಗರಿಕರ ದಿನಾಚರಣೆ ನಿಮಿತ್ತ ನಡೆದಿದ್ದ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ಆರೋಗ್ಯ ಇಲಾಖೆಯಿಂದ ಹಿರಿಯ ನಾಗರಿಕರಿಗೆ ವೈದ್ಯಕೀಯ ತಪಾಸಣೆ ನಡೆಸಲಾಯಿತು.
ಜಿಪಂ ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೊಳ್ಳಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಬಿ., ಕೆನರಾ ಬ್ಯಾಂಕ್ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಟಿಎಸ್ಎನ್ ಪೂರ್ಣಾನಂದ, ಹಿರಿಯ ನಾಗರಿಕರ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ. ಸದಾನಂದ್ ಹೆಗಡೆ, ಮಹಿಳಾ ಮಂಡಲಗಳ ಒಕ್ಕೂಟದ ಜಿಲ್ಲಾಧ್ಯಕ್ಷೆ ವಸಂತಿ ರಾವ್ ಕೊರಡ್ಕಲ್ ಉಪಸ್ಥಿತರಿದ್ದರು.
ಜಿಲ್ಲಾ ಹಿರಿಯ ನಾಗರಿಕರ ಹಾಗೂ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ ಸ್ವಾಗತಿಸಿದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರೇಮಮೂರ್ತಿ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್.ರವೀಂದ್ರ ಮತ್ತು ಕಾಂತಿ ಹರೀಶ್ ಕಾರ್ಯಕ್ರಮ ನಿರೂಪಿಸಿದರು. ಯೋಜನಾ ಸಹಾಯಕ ಶಿವಾಜಿ ವಂದಿಸಿದರು.
ಮನೆಯಲ್ಲಿರುವ ಇಂದಿನ ಕಿರಿಯರಿಗೆ ಹಿರಿಯರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕೆಂಬ ಬುದ್ಧಿಯಿಲ್ಲ. 'ವಸುದೈವ ಕುಟುಂಬಕಂ' ಎಂಬ ಭಾರತೀಯ ಪರಂಪರೆಯ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಮಕ್ಕಳು ಹೆತ್ತವರನ್ನು ತ್ಯಜಿಸುವ ಘಟನೆ ಹೆಚ್ಚುತ್ತಿರುವುದು ಆಘಾತಕಾರಿ ವಿಷಯ. ಈ ಬಗ್ಗೆ ಸಮಾಜ ಚಿಂತನೆ ನಡೆಸಬೇಕು. ವಿದ್ಯಾಭ್ಯಾಸದೊಂದಿಗೆ ಕೌಟುಂಬಿಕ ಮೌಲ್ಯಗಳ ಅರಿವು ಮೂಡಿಸಬೇಕು.> ಎಂ.ಎ. ಗಫೂರ್. ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ.