ಪೆರ್ಲ: ಕನಕದಾಸರಲ್ಲಿ ಮೌಢ್ಯದ ನಿರಾಕರಣೆ ಹಾಗೂ ವೈಚಾರಿಕ ಚಿಂತನೆಗಳಿವೆ. ಆದರೆ ಕೋಣ ಪ್ರಸಂಗ, ಕನಕನ ಕಿಂಡಿ ಮುಂತಾದ ಕಲ್ಪನೆಗಳನ್ನು ಪ್ರಚಾರಗೊಳಿಸುವ ಮೂಲಕ ಅವೈಚಾರಿಕ ಚಿಂತನೆಗಳನ್ನು ಬಿತ್ತರಿಸಲಾಗುತ್ತಿದೆ. ಉಡುಪಿಯಲ್ಲಿ ವ್ಯಾಸರಾಯರು ಕನಕದಾಸರಿಗೆ ಮೊದಲ ಪ್ರಸಾದ ನೀಡುತ್ತಿದ್ದರೆಂದು ಹರ್ಮನ್ ಮೋಗ್ಲಿಂಗ್ ದಾಖಲಿಸಿದ್ದಾರೆ ಎಂದು ವಿದ್ವಾಂಸ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಸಂಶೋಧನಾ ಕೇಂದ್ರ ಮತ್ತು ನಾಲಂದ ಕಲಾ ಮತ್ತು ವಿಜ್ಞಾನ ಕಾಲೇಜು ಸಹಯೋಗದೊಂದಿಗೆ ‘ಕನಕದಾಸರ ಸಾಹಿತ್ಯದಲ್ಲಿ ಸಾಮಾಜಿಕ ಪರಿಕಲ್ಪನೆ’ ಕುರಿತ ಕನ್ನಡ-ಮಲಯಾಳ ಉಭಯಭಾಷಾ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು. ರಾಮಧಾನ್ಯ ಚರಿತೆಯ ಕೊನೆಯಲ್ಲಿ ಬರುವ ಅತಿಹಿತದಲಿ ನೀವಿಹುದು ಎಂಬ ಮಾತು ಸಮಾಜದಲ್ಲಿ ಸಾಮರಸ್ಯ ಇರಬೇಕು ಎಂಬುದನ್ನು ಸೂಚಿಸುತ್ತದೆ ಎಂದರು.
ಉಪನ್ಯಾಸಕ ವರ್ಷಿತ್ ಕೆ. ಸ್ವಾಗತಿಸಿದರು. ಅಶ್ವಿನಿ ಕೆ.ಬಿ. ವಂದಿಸಿದರು. ಅನುಪಮಾ ಪಿ., ಆಶಾಲತಾ ಪಿ. ಕಾರ್ಯಕ್ರಮ ನಿರೂಪಿಸಿದರು.