ಉಡುಪಿ: ಬೈಂದೂರು ಬಸ್ ನಿಲ್ದಾಣದಲ್ಲಿ ಮಹಿಳೆಯ ಗಮನ ಬೇರೆಡೆ ಸೆಳೆದು ಕೈಯಲ್ಲಿದ್ದ ಚಿನ್ನದ ಬಳೆ ಕತ್ತರಿಸಿ ಸುಲಿಗೆ ಮಾಡಿದ್ದ ಮುಂಬೈ ಮೂಲದ ಮೂವರು ಅಂತರರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಂಬೆರ್ನಾಥ್ ನಿವಾಸಿಗಳಾದ ಅವಿನಾಶ್ ಸುನಿಲ್ ಗಾಯಕವಾಡ (27), ಸಂತೋಷಿ ವಿಶಾಲ್ ಜಾದವ್ (31) ಮತ್ತು ಅರ್ಚನಾ ಸುಶೀಲ್ ಜಾದವ್ (40) ಬಂಧಿತರು. ಆರೋಪಿಗಳಿಂದ 17.27 ಗ್ರಾಂ ತೂಕದ ಅಂದಾಜು 2.5 ಲಕ್ಷ ರೂ. ಮೌಲ್ಯದ ಚಿನ್ನದ ಬಳೆ, ಕೃತ್ಯಕ್ಕೆ ಬಳಸಿದ ಕಟ್ಟರ್ ಮತ್ತು ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.
ಏಪ್ರಿಲ್ 27ರಂದು ಮಧ್ಯಾಹ್ನ 2.45ರ ಸುಮಾರಿಗೆ ಸಹನಾ ಪೈ ಎಂಬುವವರು ಧಾರವಾಡಕ್ಕೆ ತೆರಳಲು ಬೈಂದೂರು ತಾಲೂಕು ಕಚೇರಿ ಮುಂಭಾಗದ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಈ ವೇಳೆ ಇಬ್ಬರು ಮಹಿಳೆಯರು ಅವರ ಬಳಿ ಬಂದು ಮಾತನಾಡಿ ಗಮನ ಬೇರೆಡೆ ಸೆಳೆದಿದ್ದಾರೆ. ಇದೇ ಸಮಯವನ್ನು ಸಾಧಿಸಿದ ತಂಡದ ಇನ್ನೊಬ್ಬ ಸದಸ್ಯ, ಸಹನಾ ಅವರ ಹಿಂದಿನಿಂದ ಬಂದು ಕೈಯಲ್ಲಿದ್ದ ಚಿನ್ನದ ಬಳೆಯನ್ನು ಕಟ್ಟರ್ನಿಂದ ಕತ್ತರಿಸಿ ತೆಗೆದು ಪರಾರಿಯಾಗಿದ್ದರು. ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.