ಶಾಸಕ ಯಶ್ ಪಾಲ್ ಸುವರ್ಣ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿದರು.
ಉಡುಪಿ: ಜಗತ್ತು ಭಾರತದತ್ತ ತಿರುಗಿ ನೋಡುವಂತಹ ಹಲವಾರು ಕಾರ್ಯಕ್ರಮಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಿದ್ದಾರೆ. ಅದರಲ್ಲಿ ಯೋಗ ದಿನಾಚರಣೆಯೂ ಒಂದಾಗಿದೆ. ಭಾರತೀಯ ಆರೋಗ್ಯ ಪರಂಪರೆಯ ಪ್ರಾಚಿನ ಜ್ಞಾನವನ್ನು ವಿಶ್ವಕ್ಕೆ ನೀಡಿ ಎಲ್ಲರೂ ಉತ್ತಮ ಆರೋಗ್ಯ ಹೊಂದಬೇಕು ಎನ್ನುವ ದೃಷ್ಟಿಯಿಂದ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಜಿಲ್ಲೆಯ ಯೋಗಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು ಎಂದು ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸ್ಕೌಟ್ಸ್&ಗೈಡ್ಸ್, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಗಳ ಇಲಾಖೆ, ಹಾಗೂ ವಿವಿಧ ಯೋಗ ಸಂಸ್ಥೆಗಳ ಸಹಯೋಗದೊಂದಿಗೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ "ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ" ಘೋಷವಾಕ್ಯದೊಂದಿಗೆ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿ-ಕಿರಿಯರ ಬೇಧವಿಲ್ಲದೆ ಎಲ್ಲರೂ ದಿನಕ್ಕೆ ಒಂದು ಘಂಟೆ ಯೋಗಾಭ್ಯಾಸ ಮಾಡಬೇಕು.
ನಿತ್ಯ ಯೋಗಾಭ್ಯಾಸದಿಂದ ಆರೋಗ್ಯವೃದ್ದಿಯಾಗುತ್ತದೆ. ಆಯುಷ್ಯ, ಆರೋಗ್ಯ ಮತ್ತು ಮಾನಸಿಕ ನೆಮ್ಮದಿಯನ್ನು ಯೋಗದಲ್ಲಿ ಕಂಡುಕೊಳ್ಳಬಹುದು. ಯೋಗಾಭ್ಯಾಸವನ್ನು ದಿನನಿತ್ಯದ ಭಾಗವಾಗಿಸಿದಾಗ ಮಾತ್ರ ಲವಲವಿಕೆಯಿಂದಿರಲು ಸಾಧ್ಯ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರತಿಕ್ ಬಾಯಲ್ ಮಾತನಾಡಿ, ಯೋಗವು ಒತ್ತಡ ನಿವಾರಣೆಗೆ ಸಹಕಾರಿ. ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ಅತಿ ಹೆಚ್ಚು ಒತ್ತಡ ಅನುಭವಿಸುತ್ತಾರೆ. ಯೋಗಾಭ್ಯಾಸ ಮಾಡುವುದರಿಂದ ಮನಸ್ಸು ಮತ್ತು ದೇಹವು ಸಮನ್ವಯದಿಂದ ಕಾರ್ಯನಿರ್ವಹಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಡಾ.ಉದಯಕುಮಾರ್ ಶೆಟ್ಟಿ, ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ, ಡಯಟ್ ಪ್ರಾಂಶುಪಾಲ ಅಶೋಕ್ ಕಾಮತ್, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಆನಂದ ಜತ್ತನ್ನ ಮತ್ತಿತರರು ಉಪಸ್ಥಿತರಿದ್ದರು. ಆಯುಷ್ ಇಲಾಖೆ ಉಪ ನಿರ್ದೇಶಕ ಸತೀಶ್ ಆಚಾರ್ಯ ಸ್ವಾಗತಿಸಿ, ಹೇಮಲತಾ ವಂದಿಸಿದರು.