ಮಣಿಪಾಲದ ಕೆಎಂಸಿಯಲ್ಲಿ ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನಾಚರಣೆ ಆಚರಿಸಲಾಯಿತು. ಡಾ. ಅನಿಲ್ ಕೆ. ಭಟ್, ಡಾ. ವಾಸುದೇವ್ ಭಟ್ ಕೆ., ಡಾ. ಅವಿನಾಶ್ ಶೆಟ್ಟಿ, ಡಾ. ಸುಬಾ ಸೂರಿಯಾ, ಅರ್ಜುನ್ ಭಂಡಾರ್ಕರ್, ಡಾ. ನಿಶಾಂತ್ ಬಿ. ಭಟ್ ಹಾಗೂ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಮಕ್ಕಳು ಉಪಸ್ಥಿತರಿದ್ದರು.
* ಡಾ. ವಾಸುದೇವ್ ಭಟ್ ಕೆ. ಅಭಿಮತ
* ಕೆಎಂಸಿಯಲ್ಲಿ ಅಂತಾರಾಷ್ಟ್ರೀಯ ದಿನ ಆಚರಣೆ
ಉಡುಪಿ: ಮಕ್ಕಳಿಗೆ 'ಬಾಲ್ಯ ಕ್ಯಾನ್ಸರ್' ಮಾರಕವಾಗಿ ಕಾಡುತ್ತಿದ್ದು, ಸಕಾಲಕ್ಕೆ ಪತ್ತೆ ಹಚ್ಚಿ ಸೂಕ್ತ ತಂಡದಿಂದ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಿದರೆ ಕಾಯಿಲೆ ಸಂಪೂರ್ಣವಾಗಿ ವಾಸಿಯಾಗುತ್ತದೆ ಎಂದು ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್ ವಿಭಾಗದ ಮುಖ್ಯಸ್ಥ ಡಾ. ವಾಸುದೇವ್ ಭಟ್ ಕೆ. ಅಭಿಮತ ವ್ಯಕ್ತಪಡಿಸಿದರು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನಾಚರಣೆ (ಐಸಿಸಿಡಿ) ನಿಮಿತ್ತ ಆಯೋಜಿಸಿದ್ದ 2024-2026ರ ಅವಧಿಯ 'ಇನ್ಸ್ಪೈರಿಂಗ್ ಆ್ಯಕ್ಷನ್' ಎಂಬ ಅಭಿಯಾನದಲ್ಲಿ ಮಾತನಾಡಿದರು.
ಮನರಂಜನಾ ಕಾರ್ಯಕ್ರಮ
ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಮಕ್ಕಳು, ಅವರ ಪಾಲಕರು ಹಾಗೂ ಕ್ಯಾನ್ಸರ್ ಗೆದ್ದವರು ಒಟ್ಟಾಗಿ ಸೇರಿ ಜಾಗೃತಿ ಮೂಡಿಸಿದರು. ಧೈರ್ಯಶಾಲಿ ಮಕ್ಕಳಿಗೆ ಬೆಂಬಲ ಸೂಚಿಸಿದರು. ಚಿಕಿತ್ಸೆ ಪಡೆಯುತ್ತಿರುವ ಮಕ್ಕಳು ಹಾಗೂ ಅವರ ಕುಟುಂಬಗಳ ಮನೋಬಲ ಹೆಚ್ಚಿಸಲು ಆಸ್ಪತ್ರೆಯ ಸಿಬ್ಬಂದಿ ಸಹಕಾರದಿಂದ ದಿನಪೂರ್ತಿ ಸಂತೋಷಭರಿತ ವಾತಾವರಣ ನಿರ್ಮಿಸಲಾಗಿತ್ತು. ಹೃದಯಸ್ಪರ್ಶಿ ಮನರಂಜನಾ ಕಾರ್ಯಕ್ರಮದ ಮೂಲಕ ಕ್ಯಾನ್ಸರ್ ಪೀಡಿತ ಮಕ್ಕಳು ಹಾಗೂ ಅವರ ಕುಟುಂಬಗಳ ಮುಖದಲ್ಲಿ ನಗು ಮೂಡಿಸಲಾಯಿತು.
ಕೆಎಂಸಿ ಮಣಿಪಾಲದ ಡೀನ್ ಡಾ. ಅನಿಲ್ ಕೆ. ಭಟ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ನರ್ಸಿಂಗ್ ಮುಖ್ಯಸ್ಥೆ ಡಾ. ಸುಬಾ ಸೂರಿಯಾ, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕ ಅರ್ಜುನ್ ಭಂಡಾರ್ಕರ್, ಲಯನ್ಸ್ ಕ್ಲಬ್ ಮಣಿಪಾಲದ ಅಧ್ಯಕ್ಷ ಡಾ. ನಿಶಾಂತ್ ಬಿ. ಭಟ್ ಉಪಸ್ಥಿತರಿದ್ದರು.
ಅಸ್ಥಿಮಜ್ಜೆ ಕಸಿಯ ನಂತರ ಕ್ಯಾನ್ಸರ್ನಿಂದ ಗುಣಮುಖರಾದ ಚೈತ್ರಾ ಮತ್ತು ಫರ್ಹಾನಾ ಕಾರ್ಯಕ್ರಮ ನಿರೂಪಿಸಿದರು.
ಬಾಲ್ಯ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಸಮುದಾಯದ ಪಾತ್ರ ಅತ್ಯಂತ ಮಹತ್ವ. ಕಾಯಿಲೆ ಪೀಡಿತ ಪ್ರತಿ ಮಗುವಿಗೂ ಅಗತ್ಯವಾದ ಸಮಗ್ರ ಚಿಕಿತ್ಸೆ ದೊರೆಯುವಂತೆ ಸಹಕಾರಾತ್ಮಕ ಪ್ರಯತ್ನಗಳ ಅಗತ್ಯತೆಯಿದೆ. ಆ ನಿಟ್ಟಿನಲ್ಲಿ ಅಗತ್ಯವಿರುವ ಮೂಲಸೌಲಭ್ಯ, ಉತ್ತಮ ಚಿಕಿತ್ಸೆ ನೀಡುವಲ್ಲಿ ಕೆಎಂಸಿ ಎಂದಿಗೂ ಬದ್ಧವಾಗಿದೆ.