ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹಾಗೂ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಅಂತರ್ ಜಿಲ್ಲಾ ಭಜನಾ ಸ್ಪರ್ಧೆ ಉದ್ಘಾಟಿಸಿದರು.
ಉಡುಪಿ: ಪ್ರಸ್ತುತ ದಿನಗಳಲ್ಲಿ ಜೀವನಶೈಲಿ ವೇಗವಾಗಿ ಬದಲಾಗುತ್ತಿದೆ. ಇದರೊಂದಿಗೆ ನಮ್ಮ ಸಂಸ್ಕಾರ ಮತ್ತು ಸಂಸತಿಗಳು ಕೂಡ ಬದಲಾಗುತ್ತಿರುವುದು ಕಳವಳಕಾರಿ ಸಂಗತಿ. ಸನಾತನ ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಭಜನೆ ಸಹಕಾರಿಯಾಗಿದೆ. ಮುಂದಿನ ಪೀಳಿಗೆಗೆ ನಮ್ಮ ಮೂಲ ಸಂಸತಿಯನ್ನು ತಲುಪಿಸುವ ಕೆಲಸ ಭಜನಾ ಸ್ಪರ್ಧೆಗಳಿಂದ ನಡೆಯಲಿದೆ ಎಂದು ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ತಿಳಿಸಿದರು.
ಮಲ್ಪೆ ಕಡಲತೀರದಲ್ಲಿ ಆನಂದ ಶರಧಿ ಹಾಗೂ ಶ್ರೀಕೃಷ್ಣ ಪರಿಸರ ಪ್ರತಿಷ್ಠಾನ ವತಿಯಿಂದ ಆಯೋಜಿಸಲಾಗಿದ್ದ ಅಂತರ್ ಜಿಲ್ಲಾ ಭಜನಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಒಳ್ಳೆಯ ಜ್ಞಾನವೇ ನಿಜವಾದ ಸಂಪತ್ತು. ಜ್ಞಾನ ಸಂಪಾದನೆಗಾಗಿ ನಿತ್ಯ ದೇವರ ಸ್ಮರಣೆ ಮಾಡುವುದು ಅತ್ಯಗತ್ಯ ಎಂದು ಹೇಳಿದರು. ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅಶೀರ್ವಚನ ನೀಡಿದರು.
ಮಾಜಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, "ಬದರಿಯಲ್ಲಿ ಮಧ್ವಾಚಾರ್ಯರ ಪ್ರತಿಮೆ ಸ್ಥಾಪನೆಗಾಗಿ ಹಿಂದಿನ ಸರ್ಕಾರದ ಅವಧಿಯಲ್ಲಿ 10 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಆದರೆ ಬದರಿಯಲ್ಲಿ ಸೂಕ್ತ ಭದ್ರತೆಯ ಕೊರತೆ ಇರುವ ಕಾರಣ ಈ ಅನುದಾನವನ್ನು ಮಲ್ಪೆಗೆ ವರ್ಗಾಯಿಸಿ, ಅನಂದ ಶರಧಿಯಲ್ಲಿ ಹೊಸ ಯೋಜನೆ ಕೈಗೆತ್ತಿಕೊಳ್ಳಬಹುದು ಎಂದು ಹೇಳಿದರು.
ವೇದಿಕೆಯಲ್ಲಿ ಶಾಸಕ ಯಶ್ಪಾಲ್ ಸುವರ್ಣ, ಉದ್ಯಮಿ ಪುರುಷೋತ್ತಮ್ ಶೆಟ್ಟಿ, ಡಾ. ಜಿ. ಎಸ್. ಚಂದ್ರಶೇಖರ್, ಸಾಧು ಸಾಲ್ಯಾನ್, ದಿನೇಶ್ ಪುತ್ರನ್, ರತ್ನಕುಮಾರ್, ಹರಿನಾರಾಯಣದಾಸ ಅಸ್ರಣ್ಣ, ಕೊರಗ ಸಮಾಜದ ಅಧ್ಯಕ್ಷ ಗಣೇಶ್ ಬಾರ್ಕೂರು, ಡಾ. ವಾದಿರಾಜ ಹಾಗೂ ಮಧೂರು ಬಾಲಸುಬ್ರಮಣ್ಯಂ ಮೊದಲಾದವರು ಉಪಸ್ಥಿತರಿದ್ದರು.