ಉಡುಪಿಯ ಮಣಿಪಾಲದಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರವನ್ನು ಎಂ.ಗೋಕುಲದಾಸ್​ ನಾಯಕ್​ ಉದ್ಘಾಟಿಸಿದರು. ಪಾಂಡುರಂಗ ಕಾಮತ್​ ಎಳ್ಳಾರೆ, ನರಸಿಂಹ ನಾಯಕ್​, ಉದಯಕುಮಾರ್​, ರಾಘವೇಂದ್ರ ಪ್ರಭು ಕರ್ವಾಲು, ಉಪೇಂದ್ರ ನಾಯಕ್​ ಇದ್ದರು. 
ಉಡುಪಿ

ಅವಕಾಶಗಳ ಸದುಪಯೋಗಕ್ಕೆ ಅಗತ್ಯ ಜಾಣ್ಮೆ

* ಎಂ.ಗೋಕುಲದಾಸ್​ ನಾಯಕ್​ ಅನಿಸಿಕೆ *

* ಮಣಿಪಾಲದಲ್ಲಿ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟನೆ *

ಉಡುಪಿ: ಜಗತ್ತು ಇಂದು ತಂತ್ರಜ್ಞಾನದ ಪರಿಣಾಮದಿಂದ ಅತ್ಯಂತ ವೇಗವಾಗಿ ಸಾಗುತ್ತಿದ್ದು, ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆ ಕಂಡುಬರುತ್ತಿದೆ. ಆದರೆ, ಈ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಬಹಳ ಅವಕಾಶಗಳಿದ್ದು, ಅತ್ಯಂತ ಜಾಣ್ಮೆಯಿಂದ ಸದುಪಯೋಗ ಮಾಡಿಕೊಳ್ಳಬೇಕು. ಜೀವನದಲ್ಲಿ ಸ್ಪಷ್ಟ ಉದ್ದೇಶ, ನಿರಂತರ ಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಎಂ.ಗೋಕುಲದಾಸ್​ ನಾಯಕ್​ ತಿಳಿಸಿದರು.

ಮಣಿಪಾಲದ ಆರ್​ಎಸ್​ಬಿ ಸಭಾಭವನದಲ್ಲಿ ರಾಜಾಪುರ ಸಾರಸ್ವತ ಸಭಾ ಪರ್ಕಳ, ಶ್ರೀ ದುರ್ಗಾಪರಮೆಶ್ವರಿ ಕ್ರೆಡಿಟ್​ ಕೋ-ಆಪರೇಟಿವ್​ ಸೊಸೈಟಿ ಮತ್ತು ಆರ್​ಎಸ್​ಬಿ ಸಂಘ ಮಣಿಪಾಲದ ವತಿಯಿಂದ ರವಿವಾರ (ಸೆ.27) ಆಯೋಜಿಸಿದ್ದ 'ಜೀವನ ಕೌಶಲ ಬೆಳವಣಿಗೆ; ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ನಂತರ ಮುಂದೇನು?' ಎಂಬ ವಿಶೇಷ ಉಚಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮಕ್ಕಳೊಂದಿಗೆ ಬೇಡ ತುಲನೆ

ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ರಾಘವೇಂದ್ರ ಪ್ರಭು ಕರ್ವಾಲು ಮಾತನಾಡಿ, ನಮ್ಮ ಮಕ್ಕಳನ್ನು ಬೇರೆ ಮನೆಯವರ ಮಕ್ಕಳೊಂದಿಗೆ ತುಲನೆ ಮಾಡುವುದನ್ನು ಪಾಲಕರು ಬಿಡಬೇಕು. ಅದರಿಂದ ಮಕ್ಕಳ ಮನಸ್ಸಿಗೆ ಇನ್ನಷ್ಟು ಘಾಸಿಯಾಗಿ, ಸಾಧನೆಯ ಮನೋಭಾವವೂ ನಶಿಸುತ್ತದೆ ಎಂದರು. ವಿವಿಧ ಸಂಸ್ಥೆಗಳಿಂದ ಮತ್ತು ಸರ್ಕಾರದಿಂದ ಸಿಗುವ ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿ ನೀಡಿದರು.

ಧನ್ವಂತರಿ ನರ್ಸಿಂಗ್​ ಕಾಲೇಜ್​ನ ಆಡಳಿತಾಧಿಕಾರಿ ಉದಯಕುಮಾರ್​ ಮಾತನಾಡಿ ಎಸ್​ಎಸ್​ಎಲ್​ಸಿ, ಪಿಯುಸಿ ನಂತರ ಇರುವ ವಿವಿಧ ಶೈಕ್ಷಣಿಕ ಅವಕಾಶ ಮತ್ತು ಉದ್ಯೋಗಗಳ ಬಗ್ಗೆ ಮಾಹಿತಿ ನೀಡಿದರು.

ಶ್ರೀ ದುರ್ಗಾಪರಮೆಶ್ವರಿ ಕ್ರೆಡಿಟ್​ ಕೋ-ಆಪರೇಟಿವ್​ ಸೊಸೈಟಿಯ ಅಧ್ಯಕ್ಷ ನರಸಿಂಹ ನಾಯಕ್​ ಶುಭಹಾರೈಸಿದರು. ರಾಜಾಪುರ ಸಾರಸ್ವತ ಸಭಾ ಅಧ್ಯಕ್ಷ ಪಾಂಡುರಂಗ ಕಾಮತ್​ ಎಳ್ಳಾರೆ ಅಧ್ಯಕ್ಷತೆ ವಹಿಸಿದ್ದರು. ಆರ್​ಎಸ್​ಬಿ ಸಂಘದ ಅಧ್ಯಕ್ಷ ಉಪೇಂದ್ರ ನಾಯಕ್​ ಉಪಸ್ಥಿತರಿದ್ದರು.

ಕಾರ್ಯದರ್ಶಿ ಸುರೇಂದ್ರ ನಾಯಕ್​ ವಂದಿಸಿದರು. ದೀಪಕ್​ ಕಾರ್ಯಕ್ರಮ ನಿರೂಪಿಸಿದರು.