ವಾಡಿಕೆಗಿಂತ ಅತಿಯಾಗಿ ಸುರಿದ ಮಳೆಯಿಂದಾಗಿ ಹಾನಿಗೊಂಡಿರುವ ಅಡಕೆ ತೋಟ. (ಸಾಂದರ್ಭಿಕ ಚಿತ್ರ)
* ಅಡಕೆ, ಕಾಳುಮೆಣಸು ಬೆಳೆ ನಷ್ಟ ತಗ್ಗಿಸಿದ ವಿಮೆ
* 8,647 ಕೃಷಿಕರಿಗೆ 41.63 ಕೋಟಿ ರೂ. ಜಮೆ
ಪ್ರತಿ ವರ್ಷವೂ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಬೆಳೆ ಹಾನಿಗೊಂಡು ತೀವ್ರ ನಷ್ಟ ಅನುಭವಿಸುತ್ತಿದ್ದ ಉಡುಪಿ ಜಿಲ್ಲೆಯ ರೈತರಿಗೆ ಈ ಬಾರಿ 'ಹವಾಮಾನ ಆಧಾರಿತ ಬೆಳೆ ವಿಮೆ' ಕೈಹಿಡಿದಿದೆ. ಕಳೆದ ಮಳೆಗಾಲದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿ ಅಪಾರ ಪ್ರಮಾಣದಲ್ಲಿ ತೋಟಗಾರಿಕಾ ಬೆಳೆಯಾದ ಅಡಕೆ ಹಾಗೂ ಕಾಳುಮೆಣಸು ಹಾನಿಯಾಗಿತ್ತು.
ಉಡುಪಿ ಜಿಲ್ಲೆಯ ಒಟ್ಟು 8,647 ಕೃಷಿಕರ ಖಾತೆಗೆ ಒಟ್ಟು 41.63 ಕೋಟಿ ರೂ. ವಿಮಾ ಹಣ ಜಮಾ ಆಗಿದ್ದು, ನಷ್ಟದಿಂದ ಕಂಗೆಟ್ಟಿದ್ದ ಬೆಳೆಗಾರರ ಮೊಗದಲ್ಲಿ ತುಸು ಮಂದಹಾಸ ಕಂಡುಬಂದಿದೆ. ವಿವಿಧ ಕಾರಣಗಳಿಂದಾಗಿ ರೈತರ 244 ಪ್ರಕರಣಗಳಿಗೆ ಬೆಳೆ ವಿಮೆ ಪರಿಹಾರ ಜಮಾ ಆಗಿಲ್ಲ.
ಕಂಗೆಟ್ಟಿದ್ದ ಅಡಕೆ ಕೃಷಿಕರು
ಕಳೆದ ಮಳೆಗಾಲದ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ಅಪಾರ ಪ್ರಮಾಣದಲ್ಲಿ ಅಡಕೆ ಹಾಗೂ ಕಾಳುಮೆಣಸು ಹಾನಿಯಾಗಿತ್ತು. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಕೃಷಿಕರಿಗೆ ಅತಿಯಾದ ಮಳೆ ಕಂಗೆಡಿಸಿತ್ತು. ತೋಟಗಾರಿಕಾ ಇಲಾಖೆಯ ವಿಜ್ಞಾನಿಗಳು ಜಿಲ್ಲೆಯ ಅಡಕೆ ಬೆಳಗಾರರ ತೋಟಗಳಲ್ಲಿ ಪರಿಶೀಲನೆ ನಡೆಸಿ, 18,361 ರೈತರ ಅಡಕೆ ತೋಟ ಹಾನಿಯಾಗಿದ್ದಾಗಿ ವರದಿಯನ್ನೂ ನೀಡಿದ್ದರು.
ಕಮರಿದ ಕಾಳುಮೆಣಸು
ಅಡಕೆ ಬೆಳೆಯೊಂದಿಗೆ ಕಾಳುಮೆಣಸು ಬೆಳೆದಿದ್ದು, ಅತಿಯಾದ ಮಳೆಯಿಂದ ಬೆಳೆ ಕಮರಿ ಹೋಗಿತ್ತು. ಕಿಲೋಗೆ ಕನಿಷ್ಠ 600 ರೂ.ನಿಂದ 800ರೂ. ಬೆಲೆ ಲಭಿಸಿ, ಜೀವನಕ್ಕೆ ಆಧಾರವಾಗುತ್ತಿದ್ದ ಈ ಬೆಳೆಯೂ ಹಾನಿಯಾಗಿತ್ತು. ಅಡಕೆಗೆ ಸಂಬಂಧಿಸಿ 19,993 ಪ್ರಕರಣಗಳಲ್ಲಿ 40.33 ಕೋಟಿ ರೂ. ಹಾಗೂ ಕಾಳುಮೆಣಸಿನ 983 ಪ್ರಕರಣಗಳಲ್ಲಿ 1.30 ಕೋಟಿ. ರೂ. ವಿಮಾ ಹಣ ಆಯಾ ರೈತರ ಖಾತೆಗೆ ಜಮಾ ಆಗಿದೆ.
ಶೇ.30 ಬೆಳೆ ವಿಮಾ ಕಂತು ಭರಣ
ಕೇಂದ್ರ ಸರ್ಕಾರ 2007ರಲ್ಲಿಯೇ ಪ್ರಾಯೋಗಿಕವಾಗಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಜಾರಿಗೊಳಿಸಿದ್ದರೂ ರೈತರಿಂದ ಹೆಚ್ಚು ಸ್ಪಂದನೆ ಇರಲಿಲ್ಲ. ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ ಶೇ.12.50 ಹಾಗೂ ರೈತರು ಶೇ.5 ಸೇರಿ ಒಟ್ಟು ಶೇ.30ರಷ್ಟು ವಿಮೆಯ ಕಂತು ಭರಿಸಲಾಗಿತ್ತು. ಪ್ರತಿ ಹೆಕ್ಟೇರ್ಗೆ ರೈತರು ಸುಮಾರು 6,400 ರೂ. ವಿಮಾ ಕಂತು ಪಾವತಿಸಿದ್ದರು. ವಿಮಾ ಯೋಜನೆಯ ಮಾನದಂಡದಲ್ಲಿ ಹೆಕ್ಟೇರ್ಗೆ ಗರಿಷ್ಠ 1.28 ಲಕ್ಷ ರೂ. ಪರಿಹಾರ ಕೊಡಲು ಅವಕಾಶವಿದೆ. ಜಿಲ್ಲೆಯ 8,647 ರೈತರು ಈ ಬಾರಿ ಒಟ್ಟು 3.18 ಕೋಟಿ ರೂ. ವಿಮಾ ಹಣ ಪಾವತಿಸಿದ್ದು, ಕೆಲ ರೈತರಿಗೆ ಗರಿಷ್ಠ 1.05 ಲಕ್ಷ ರೂ.ವರೆಗೆ ಪರಿಹಾರ ದೊರೆತಿದೆ ಎಂದು ಉಡುಪಿ ಜಿಲ್ಲಾ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ನಿಧೀಶ್ ಹೊಳ್ಳ ತಿಳಿಸಿದ್ದಾರೆ.
ಜಿಲ್ಲೆಯ ರೈತರ ಮಾಹಿತಿ, ಭರಿಸಿದ ಕಂತು
ತಾಲೂಕು ರೈತರ ಸಂಖ್ಯೆ ಎಕರೆ ವಿಮಾ ಕಂತು (ಲ.ರೂ.)
ಕುಂದಾಪುರ 4,553 11,723 1.53 (ಕೋ.ರೂ.)
ಬೈಂದೂರು 1,256 3,689 54.94
ವಿಳಂಬವಾದರೂ ಬೆಳೆ ವಿಮಾ ಪರಿಹಾರ ಹಣ ಜಮಾ ಆಗಿರುವುದು ಕೃಷಿಕರಿಗೆ ಸಂತಸ ತಂದಿದೆ. ನೀಡಿರುವ ಪರಿಹಾರ ನಮಗಾಗಿರುವ ಬೆಳೆ ನಷ್ಟ ಸರಿದೂಗಿಸದು. ಆದರೆ, ಸಂಪೂರ್ಣ ಹಾನಿಯಾದ ತೋಟವನ್ನು ಪುನ:ಶ್ಚೇತನಗೊಳಿಸಲು, ಮರದ ಬುಡ ಮಾಡಿಸಲು ಆರ್ಥಿಕ ಸಹಕಾರ ದೊರೆತಂತಾಗಿದೆ. ಕೇಂದ್ರ-ರಾಜ್ಯ ಸರ್ಕಾರ ತಕ್ಕ ಮಟ್ಟಿಗೆ ರೈತರಿಗೆ ಆಸರೆಯಾದಂತಾಗಿದೆ.
ಉಡುಪಿ ಜಿಲ್ಲೆಯಲ್ಲಿ ಅತಿಯಾಗಿ ಮಳೆ ಸುರಿದು ಬೆಳೆ ಹಾನಿ ಅನುಭವಿಸಿದ ಬೆಳೆಗಾರರಿಗೆ ಗರಿಷ್ಠ ಮಟ್ಟದಲ್ಲಿ ವಿಮಾ ಪರಿಹಾರ ಲಭಿಸಿದೆ. ಇನ್ನೂ 244 ಪ್ರಕರಣಗಳಿಗೆ ಬ್ಯಾಂಕ್ ಖಾತೆಯ ಲೋಪದಿಂದಾಗಿ ಜಮಾ ಆಗಿಲ್ಲ. ಅಂತಹ ರೈತರು ತಮ್ಮ ನೋಂದಣಿ ಇರುವ ಬ್ಯಾಂಕ್ಗೆ ಭೇಟಿ ನೀಡಿ ಖಾತೆ ಸರಿಪಡಿಸಿಕೊಳ್ಳಬೇಕು. ತೋಟಗಾರಿಕಾ ಇಲಾಖೆಗೆ ಬಂದರೂ ಸಹ ಸೂಕ್ತ ಮಾಹಿತಿ ನೀಡಲಾಗುವುದು.