ಉಡುಪಿ: ಜಿಲ್ಲೆಯಲ್ಲಿ ಆದರ್ಶ ಆಸ್ಪತ್ರೆ ಎಂದರೆ ಎಲ್ಲರಿಗೂ ಚಿರಪರಿಚಿತ. 30 ವರ್ಷಗಳಿಗೂ ಹೆಚ್ಚು ಕಾಲ ವೈದ್ಯಕಿಯ ಸೇವೆಯೊಂದಿಗೆ ನಿರಂತರ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಜಿ.ಎಸ್. ಚಂದ್ರಶೇಖರ ಅವರು ಬಡವರ ಪಾಲಿನ ಆಶಾಕಿರಣ ಆಗಿದ್ದಾರೆ. ಇಂತಹ ಸೇವಾನಿರತ ವ್ಯಕ್ತಿಯನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿ ಕೊನೆಯ ಸಂದರ್ಭದಲ್ಲಿ ಕೈಬಿಟ್ಟ ಸರ್ಕಾರದ ನಡೆಗೆ ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಸರ್ಕಾರದ ಪಟ್ಟಿಯಲ್ಲಿ ಅವರ ಹೆಸರು ಪ್ರಕಟಿಸಿ ನಂತರ 'ತಾಂತ್ರಿಕ ದೋಷ' ಎಂಬ ಕಾರಣ ನೀಡಿ ಪಟ್ಟಿಯಿಂದ ಹೆಸರು ತೆಗೆದು ಬೇರೆಯವರ ಹೆಸರನ್ನು ಸೇರಿಸಿರುವುದಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಾನಪದ ಪರಿಷತ್ ಖಂಡನೆ ವ್ಯಕ್ತಪಡಿಸಿದೆ.
ಕಸಾಪ ಅಸಮಾಧಾನ
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಈ ವಿಚಾರವಾಗಿ ಪ್ರತಿಕ್ರಿಯಿಸಿ, ಡಾ.ಜಿ.ಎಸ್. ಚಂದ್ರಶೇಖರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿ, ಆ ಪಟ್ಟಿಯನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿ ಆಮೇಲೆ ಬದಲಾವಣೆ ಮಾಡಿದ್ದು ಸರಿಯಾದ ಕ್ರಮವಲ್ಲ. ಡಾ. ಚಂದ್ರಶೇಖರ ಅವರ ವೈದ್ಯಕೀಯ ಸೇವೆ ಅನ್ಯನ್ಯ. ಅವರದ್ದು ಬೆಲೆಕಟ್ಟಲಾಗದ ಕಾಯಕ. ಅವರಿಗಾದ ಅವಮಾನ ಇಡೀ ನಾಡಿಗಾದ ಅವಮಾನ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ತಪ್ಪನ್ನು ಸರಿಪಡಿಸಬೇಕೆಂದು ಹಕ್ಕೊತ್ತಾಯ ಮಾಡುತ್ತಿದ್ದೇನೆ ಎಂದರು.
ಅನ್ಯಾಯ ಸರಿಪಡಿಸಿ
ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ ಎಚ್.ಪಿ. ಪ್ರತಿಕ್ರಿಯಿಸಿ, ಪ್ರಶಸ್ತಿ ಪ್ರಕಟಣೆಯ ನಂತರ ರಾತ್ರೋರಾತ್ರಿ ಡಾ. ಚಂದ್ರಶೇಖರ ಅವರ ಹೆಸರನ್ನು ಸರ್ಕಾರ ಹಿಂಪಡೆದಿದೆ. ಇದು ಆ ವ್ಯಕ್ತಿಗೆ ಮಾತ್ರವಲ್ಲ ಅವರನ್ನು ನಂಬಿ ಗೌರವಿಸುವ ಸಮಸ್ತ ಸಮಾಜಕ್ಕೆ ಮಾಡಿದ ಅವಮಾನವಾಗಿದೆ. ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವೈದ್ಯರೊಬ್ಬರನ್ನು ಈ ರೀತಿ ನಡೆಸಿಕೊಳ್ಳುವುದು ತಪ್ಪು. ತಾಂತ್ರಿಕ ದೋಷವಾದರೆ ಅದನ್ನು ಸರಿಪಡಿಸಲು ಅವಕಾಶವಿತ್ತು. ಪಟ್ಟಿಯಿಂದ ಕೈಬಿಡಬಾರದಿತ್ತು. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಅವರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಸೇವಕರನ್ನು ಗೌರವಿಸುವ ನಮ್ಮ ನಾಡಿನ ಸಂಸ್ಕೃತಿ ಉಳಿಸೋಣ ಎಂದರು.
ಕನ್ನಡಕ್ಕೆ ತೋರಿದ ಅಗೌರವ
ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಪ್ರತಿಕ್ರಿಯಿಸಿ, ಡಾ. ಜಿ.ಎಸ್. ಚಂದ್ರಶೇಖರ ಅವರು ವೈದ್ಯರಾಗಿ, ಸಮಾಜ ಸೇವೆಯ ಮೂಲಕವೂ ಗಮನ ಸೆಳೆಯುತ್ತಾರೆ. ವೀರಶೈವ ಲಿಂಗಾಯತ ಮಹಾಸಭಾದ ಗೌರವಾಧ್ಯಕ್ಷರೂ ಆಗಿದ್ದಾರೆ. ಅಂತಹ ಸರಳ ವ್ಯಕ್ತಿತ್ವದ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿ, ಬಳಿಕ ತಾಂತ್ರಿಕ ದೋಷದ ನೆಪವೊಡ್ಡಿ ಅವರ ಹೆಸರು ಕೈಬಿಟ್ಟಿರುವುದು ಕನ್ನಡಕ್ಕೆ ತೋರಿದ ಅಗೌರವ. ಅವರನ್ನು ಕೈಬಿಟ್ಟಿರುವುದು ನಿಜಕ್ಕೂ ನೋವಿನ ಸಂಗತಿ. ಪ್ರಶಸ್ತಿ ಘೋಷಣೆಗೂ ಮುನ್ನ ಅಗತ್ಯ ಪರಿಶೀಲನೆ ನಡೆಸಿ, ಎಲ್ಲ ಪ್ರಕ್ರಿಯೆ ಸಮರ್ಪಕವಾಗಿ ಪೂರ್ಣಗೊಳಿಸುವುದು ಸಂಬಂಧಪಟ್ಟ ಇಲಾಖೆಯ ಕರ್ತವ್ಯ. ಆಡಳಿತಾತ್ಮಕ ಲೋಪಗಳಾಗಿದ್ದರೆ ಸರಿಪಡಿಸಬೇಕೇ ಹೊರತು ಸಾಧಕರಿಗೆ ಅನ್ಯಾಯವಾಗುವ ರೀತಿಯಲ್ಲಿ ನಡೆದುಕೊಳ್ಳಬಾರದು ಎಂದರು.
ಉಡುಪಿ ಖ್ಯಾತ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಪ್ರತಿಕ್ರಿಯಿಸಿ, ಡಾ. ಚಂದ್ರಶೇಖರ ಅವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ್ದರೂ ತಾಂತ್ರಿಕ ಕಾರಣ ನೀಡಿ ಕೈಬಿಡಲಾಗಿದೆ. ಪಟ್ಟಿಯಲ್ಲಿ ಜಿಲ್ಲೆಯ ಹೆಸರು ತಪ್ಪಾಗಿದ್ದರೆ ಉತ್ತರ ಕನ್ನಡ ಜಿಲ್ಲೆಯ ಬದಲಾಗಿ ಉಡುಪಿ ಎಂದು ಒಂದು ಸಾಲಿನ ತಿದ್ದುಪಡಿ ಮಾಡಿದ್ದರೆ ಸಾಕಾಗಿತ್ತು. ಆದರೆ, ಇಡೀ ರಾಜ್ಯಕ್ಕೆ ಘೋಷಿಸಿದ ಪಟ್ಟಿಯಿಂದ ಗೌರವಾನ್ವಿತರ ಹೆಸರು ತೆರವು ಮಾಡಿದ್ದು ಸರಿಯಲ್ಲ. ಯಾವ ತಪ್ಪನ್ನೂ ಮಾಡದ ವ್ಯಕ್ತಿಗೆ ಸರ್ಕಾರ ಸಾರ್ವಜನಿಕವಾಗಿ ಮಾಡಿದ ಅವಮಾನ ಎಂದು ಟೀಕಿಸಿದ್ದಾರೆ.
ಪ್ರಶಸ್ತಿ ಪಟ್ಟಿಯಿಂದ ನನ್ನ ಹೆಸರು ಕೈಬಿಟ್ಟ ವಿಚಾರದಲ್ಲಿ ನಿರ್ಲಿಪ್ತನಾಗಿದ್ದೇನೆ. ಯಾವುದೇ ಪ್ರಶಸ್ತಿಗೋಸ್ಕರ ನಾನು ವೈದ್ಯಕೀಯ ಸೇವೆ ಮಾಡುತ್ತಿಲ್ಲ. ಪ್ರಶಸ್ತಿ ಬಂದರೂ, ಬಾರದಿದ್ದರೂ ನನ್ನ ಸೇವೆ ನಿರಂತರ. ಆದರೆ, ಪ್ರಶಸ್ತಿ ಪಟ್ಟಿಯಲ್ಲಿ ನನ್ನ ಹೆಸರು ಉತ್ತರ ಕನ್ನಡ ಜಿಲ್ಲೆಯಿಂದ ಆಯ್ಕೆಯಾಗಿದ್ದು ಅಚ್ಚರಿ ಮೂಡಿಸಿದೆ. ಇದು ಸರ್ಕಾರದ ನಿರ್ಧಾರ. ಈ ವಿಚಾರವಾಗಿ ನಾನು ಬೇರೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.ಡಾ. ಜಿ.ಎಸ್. ಚಂದ್ರಶೇಖರ. ಆದರ್ಶ ಆಸ್ಪತ್ರೆ ಉಡುಪಿ.