ಮುಳ್ಳಿಕಟ್ಟೆ ಜಂಕ್ಷನ್ ಸಮೀಪ ಇನ್ಸುಲೇಟರ್ ಲಾರಿ ರಸ್ತೆ ಬದಿಗೆ ಉರುಳಿರುವುದು.
ಕುಂದಾಪುರ: ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಜಂಕ್ಷನ್ ಸಮೀಪ ಶನಿವಾರ ಬೆಳಗ್ಗೆ ರಾ.ಹೆ.66ರಲ್ಲಿ ಇನ್ಸುಲೇಟರ್ ಲಾರಿಯೊಂದು ರಸ್ತೆ ಬದಿಗೆ ಮಗುಚಿ ಬಿದ್ದಿದ್ದು, ಹೆದ್ದಾರಿ ಬದಿಯಲ್ಲಿ ವಾಸಿಸುತ್ತಿದ್ದ ವಲಸೆ ಕೂಲಿ ಕಾರ್ಮಿಕರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಬೈಂದೂರಿನಿಂದ ಕುಂದಾಪುರ ಕಡೆಗೆ ಮೀನು ತುಂಬಿಸಿ ಸಾಗುತ್ತಿದ್ದ ಲಾರಿ ಮುಳ್ಳಿಕಟ್ಟೆ ಜಂಕ್ಷನ್ ಸಮೀಪ ಅದೇ ವಾರ್ಗದಲ್ಲಿ ಸಾಗುತ್ತಿದ್ದ ಇನ್ನೊಂದು ಇನ್ಸುಲೇಟರ್ ಲಾರಿಗೆ ಡಿಕ್ಕಿ ಹೊಡೆದು ವಲಸೆ ಕಾರ್ಮಿಕರು ವಾಸಿಸುತ್ತಿರುವ ಟೆಂಟ್ ಸಮೀಪದಲ್ಲೇ ರಸ್ತೆ ಬದಿಯ ಚರಂಡಿಯಲ್ಲಿ ಉರುಳಿದೆ. ಚರಂಡಿ ಇಲ್ಲದಿದ್ದರೆ ಲಾರಿ ಕೂಲಿ ಕಾರ್ಮಿಕರ ಟೆಂಟ್‌ಗಳ ಮೇಲೆ ಬೀಳುವ ಸಾಧ್ಯತೆ ಇತ್ತು. ಅಪಘಾತ ನಡೆಯುವ ಕೆಲವೇ ಕ್ಷಣದ ಮುಂಚೆ ರಾ.ಹೆ. ಗುತ್ತಿಗೆ ಸಂಸ್ಥೆ ಇದೇ ಸ್ಥಳದಲ್ಲಿ ಕೂಲಿ ಕಾರ್ಮಿಕರನ್ನು ಇಳಿಸಿ ಹೋಗಿತ್ತು. ಅಪಘಾತದ ವೇಳೆ ಕಾರ್ಮಿಕರು ಟೆಂಟ್‌ನಲ್ಲೇ ಇದ್ದು ಭಯಭೀತರಾಗಿದ್ದರು.
ಕಾರು ಪಲ್ಟಿಯಾಗಿ ಏಳು ಕಾರ್ಮಿಕರಿಗೆ ಗಾಯ
ಕುಂದಾಪುರ: ಕರ್ಕುಂಜೆ ಗ್ರಾಮದ ರಾಜ್ಯ ಹೆದ್ದಾರಿ 27ರ ನೇರಳಕಟ್ಟೆ ಜಂಕ್ಷನ್ ಬಳಿ ಶುಕ್ರವಾರ ಕೂಲಿ ಕೆಲಸಕ್ಕೆ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮಗುಚಿ ಬಿದ್ದು, ಚಾಲಕ ಸಹಿತ ಏಳು ಮಂದಿ ಗಾಯಗೊಂಡಿದ್ದಾರೆ.
ಸವಿತಾ ಮತ್ತು ಶಾಂತಾ ಎಂಬುವರು ಲಕ್ಷ್ಮಣ್ ನಾಯ್ಕ ಅವರ ಕಾರಿನಲ್ಲಿ ಕೆಂಚನೂರಿನಿಂದ ಸಿದ್ದಾಪುರ ಜನ್ಸಾಲೆಗೆ ಕೂಲಿ ಕಾರ್ಮಿಕರಾದ ಮೂಕಾಂಬು, ಜ್ಯೋತಿ, ಸುಮತಿ, ಗಂಗಾ, ಶಾಂತಾ ಎಂಬುವರನ್ನು ಕರೆದುಕೊಂಡು ಹೋಗುತ್ತಿದ್ದಾಗ ನೇರಳಕಟ್ಟೆ ಜಂಕ್ಷನ್ ಬಳಿ ರಸ್ತೆಯಲ್ಲಿದ್ದ ಜಾನುವಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಕಾರು ಪಲ್ಟಿಯಾಗಿದೆ.
ಗಾಯಗೊಂಡ ಸವಿತಾ, ಶಾಂತಾ, ಮೂಕಾಂಬು, ಜ್ಯೋತಿ, ಸುಮತಿ, ಶಾಂತಾ ಮತ್ತು ಕಾರು ಚಾಲಕ ಲಕ್ಷ್ಮಣ ನಾಯ್ಕ ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡಿರುವ ಗಂಗಾ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಬೈಲ್ ಟವರ್‌ನಲ್ಲಿಟ್ಟಿದ್ದ ವಸ್ತುಗಳು ಕಳವು
ಕುಂದಾಪುರ: ಕುಂದಾಪುರ ತಾಲೂಕಿನ ಕೊರ್ಗಿ ಎಂಬಲ್ಲಿ ಮೊಬೈಲ್ ಟವರ್‌ನಲ್ಲಿ ಇಟ್ಟಿದ್ದ ವಸ್ತುಗಳನ್ನು ಕಳವು ವಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಇಂಡಸ್ ಕಂಪನಿ ಕಡೆಯಿಂದ ಕೊರ್ಗಿ ಗ್ರಾಮದ ದಿನೇಶ್ ಆಚಾರ್ಯ ಎಂಬುವರ ಜಾಗದಲ್ಲಿ ಕರಾರು ಪ್ರಕಾರ 10 ವರ್ಷಗಳ ಹಿಂದೆ ಮೊಬೈಲ್ ಟವರ್ ನಿರ್ಮಿಸಿದ್ದು, ಟವರ್‌ನಲ್ಲಿ ಒಂದು ವರ್ಷಗಳ ಹಿಂದೆ ಖಾಸಗಿ ಕಂಪನಿ ವಿವಿಧ ವಸ್ತುಗಳನ್ನು ಟವರ್‌ನಲ್ಲಿ ಇಟ್ಟಿದ್ದರು. ಮೇ 30ರಂದು ಫೀಲ್ಡ್ ಇಂಜಿನಿಯರ್ ಬಂದು ನೋಡಿದಾಗ ಟವರ್‌ನ ವಸ್ತುಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಕುಂದಾಪುರ ಗ್ರಾವಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.