ಉಡುಪಿಯ ಟಿ.ಎ. ಪೈ ಮೋಡರ್ನ್ ಶಾಲೆಯ ವಾರ್ಷಿಕೋತ್ಸವದಲ್ಲಿ ಯಶ್ಪಾಲ್ ಸುವರ್ಣ ಮಾತನಾಡಿದರು. ಎಚ್.ಆರ್. ಶೆಣೈ, ಡಾ.ಯಲ್ಲಮ್ಮ, ನಾರಾಯಣ ಭಂಡಾರಿ, ಸುಲೋಚನಾ, ರಶ್ಮಿ ಭಟ್, ಶಿವಪ್ರಸಾದ್ ಯು. ಕಲ್ಯಾಣಿ ಪೈ, ನಿರ್ಮಲಾ ಅಮೀನ್ ಇತರರಿದ್ದರು.
* ಉಡುಪಿ ಶಾಸಕ ಯಶ್ಪಾಲ್ ಸಲಹೆ
* ಟಿ.ಎ. ಪೈ ಶಾಲೆಯ ವಾರ್ಷಿಕೋತ್ಸವ ಉದ್ಘಾಟನೆ
ಉಡುಪಿ: ಉಡುಪಿಯ ಹೃದಯ ಭಾಗದಲ್ಲಿರುವ ಟಿ.ಎ. ಪೈ ಮೋಡರ್ನ್ ಶಾಲೆಯು ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಮೂಡಿಸಿದೆ. ಇದೀಗ ಶತಮಾನದ ಹೊಸ್ತಿಲಲ್ಲಿದ್ದು, ಇಂತಹ ಆದರ್ಶ ಶಾಲೆಗಳು ಪ್ರಧಾನಿ ನರೇಂದ್ರ ಮೋದಿ ಅವರ 'ವಿಶ್ವಗುರು ಭಾರತ'ದ ಕನಸನ್ನು ನನಸಾಗಿಸಲಿವೆ. ಮಕ್ಕಳಿಗೆ ಕಲಿಕೆಯ ಸಂದರ್ಭದಲ್ಲಿಯೇ ರಾಷ್ಟ್ರಾಭಿಮಾನದ ಪ್ರೀತಿ ಮೂಡಿಸಬೇಕು ಎಂದು ಶಾಸಕ ಯಶ್ಪಾಲ್ ಸುವರ್ಣ ಸಲಹೆ ನೀಡಿದರು.
ಉಡುಪಿ ಕಾಡಬೆಟ್ಟಿನಲ್ಲಿರುವ ಟಿ.ಎ. ಪೈ ಮೋಡರ್ನ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶ್ರೀ ಜಗನ್ನಾಥ ರಾವ್ ಸ್ಮಾರಕ ವೇದಿಕೆಯಲ್ಲಿ ಆಯೋಜಿಸಿದ್ದ 98ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಯಲ್ಲಮ್ಮ ಮಾತನಾಡಿ ಶಿಕ್ಷಕರಿಗೆ, ಪಾಲಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅವರವರ ಕರ್ತವ್ಯ ಮತ್ತು ಸಂಸ್ಕಾರದ ಕುರಿತಾಗಿ ಅರಿವು ನೀಡಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಆರ್. ಶೆಣೈ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾರಾಯಣ ಭಂಡಾರಿ, ಉಪಾಧ್ಯಕ್ಷ ಮೋಹನ್ ಶೆಟ್ಟಿ, ಶಿವಪ್ರಸಾದ್, ಯು. ಕಲ್ಯಾಣಿ ಪೈ, ಶಿವಪ್ರಸಾದ್, ಕಾರ್ಯದರ್ಶಿ ನಿರ್ಮಲಾ ಎಸ್. ಅಮೀನ್, ರಕ್ಷಕ&ಶಿಕ್ಷಕ ಸಂಘದ ಅಧ್ಯಕ್ಷ ದೀಪಕ್ ಯು. ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯಿನಿ ಸುಲೋಚನಾ ಶಾಲಾ ವಾರ್ಷಿಕ ವರದಿ ವಾಚಿಸಿದರು. ಟ್ರಸ್ಟಿ ರಮೇಶ್ ರಾವ್ ಆಡಳಿತ ಮಂಡಳಿಯ ವಾರ್ಷಿಕ ವರದಿ ಮಂಡಿಸಿದರು. ಕಪ್ಪೆಟ್ಟು ನಾರಾಯಣ ಭಂಡಾರಿ ಸ್ವಾಗತಿಸಿದರು. ಮೋಹನ್ ಶೆಟ್ಟಿ ವಂದಿಸಿದರು. ಶಿಕ್ಷಕಿ ಶಾಲಿನಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ಹಾಗೂ ಹಳೆಯ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯಿತು.