ಉಡುಪಿ: ಉಚ್ಚಿಲ ಮಹಾಲಕ್ಷ್ಮೀ ತಾಯಿಯ ಸನ್ನಿಧಿಯಲ್ಲಿ ದಸರಾ ನಿಮಿತ್ತ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಅವರಲ್ಲಿರುವ ಸುಪ್ತ ಪ್ರತಿಭೆ ಹಾಗೂ ಸೃಜನಶೀಲತೆ ಅನಾವರಣಕ್ಕೆ ಈ ಕಾರ್ಯಕ್ರಮ ವೇದಿಕೆಯಾಗಿದೆ. ಚಿತ್ರಕಲೆಯ ಮೂಲಕವೂ ಎಳವೆಯಿಂದಲೇ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡುವಂತಾಗಲಿ ಎಂದು ಉಡುಪಿ ಶಾಸಕ ಹಾಗೂ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ನ ಅಧ್ಯಕ್ಷ ಯಶ್ಪಾಲ್ ಸುವರ್ಣ ಆಶಯ ವ್ಯಕ್ತಪಡಿಸಿದರು.
ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವದ ನಿಮಿತ್ತ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ಶನಿವಾರ (ಅ.17) ಆಯೋಜಿಸಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದಲ್ಲಿ ಮಲ್ಪೆ ಮೀನುಗಾರರ ಸಂಘದ ನಿಕಟಪೂರ್ವ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಮಲ್ಪೆ ಯಾಂತ್ರಿಕ ಟ್ರಾಲ್ ದೋಣಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ರಾಮಚಂದ್ರ ಕುಂದರ, ಉಚ್ಚಿಲ ದಸರಾ ಮಹೋತ್ಸವ ಸಮಿತಿಯ ಅಧ್ಯಕ್ಷ ವಿನಯ ಕರ್ಕೇರ, ಬ್ಯಾಂಕ್ನ ಉಪಾಧ್ಯಕ್ಷ ವಾಸುದೇವ ಸಾಲ್ಯಾನ, ನಿರ್ದೇಶಕರಾದ ಶಶಿಕಾಂತ ಪಡುಬಿದ್ರೆ, ಶೋಭೇಂದ್ರ ಸಾಲ್ಯಾನ, ವನಜಾ ಪುತ್ರನ್, ವ್ಯವಸ್ಥಾಪಕ ನಿರ್ದೇಶಕ ಶರತ್ ಶೆಟ್ಟಿ, ಸಹಾಯಕ ಪ್ರಧಾನ ವ್ಯವಸ್ಥಾಪಕಿ ಶಾರಿಕಾ ಕಿರಣ, ಆನಂದ ಸೆಲ್ವಂ ಉಪಸ್ಥಿತರಿದ್ದರು.
ಬ್ಯಾಂಕ್ನ ಸಿಬ್ಬಂದಿ ವಿಜೇತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಯಶ್ಪಾಲ್ ಸುವರ್ಣ ಅಧ್ಯಕ್ಷತೆಯ ಮಹಾಲಕ್ಷ್ಮೀ ಬ್ಯಾಂಕ್ ಮತ್ತು ದಕ್ಷಿಣ ಕನ್ನಡ ಮೀನು ಮಾರಾಟ ಫೆಡರೇಷನ್ ಸಂಸ್ಥೆಯ ಮೂಲಕ ಉಚ್ಚಿಲ ದಸರಾ ಮಹೋತ್ಸವಕ್ಕೆ ವಿಶೇಷ ಸಹಕಾರ ನೀಡಲಾಗುತ್ತಿದೆ. ಜತೆಗೆ ಚಿತ್ರಕಲೆ, ಕಿನ್ನಿ ಪಿಲಿ ಹಾಗೂ ಪೊಣ್ಣು ಪಿಲಿ ನಲಿಕೆ ಸ್ಪರ್ಧೆಗಳ ಆಯೋಜನೆಯಿಂದ ಉಚ್ಚಿಲ ದಸರಾ ಮಹೋತ್ಸವಕ್ಕೆ ಹೊಸ ಮೆರಗು ತಂದಿದೆ.ಜಯ ಸಿ. ಕೋಟ್ಯಾನ. ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ.