ವಿಶು ಶೆಟ್ಟಿ ಸಹಕಾರದಲ್ಲಿ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸಗೆ ದಾಖಲಾಗಿರುವ ಗಾಯಾಳು ಗಣೇಶ್​ ಆಚಾರ್ಯ. 
ಉಡುಪಿ

ಆಯುಷ್ಮಾನ್​ ಸೌಲಭ್ಯ ಲಭಿಸದೆ ಗಾಯಾಳು ಪರದಾಟ

* ಅಸಹಾಯಕ ಪತ್ನಿಗೆ ಉಡುಪಿಯ ವಿಶು ಶೆಟ್ಟಿ ನೆರವು

* ಮಂಗಳೂರಿನ ವೆನ್ಲಾಕ್​ ಆಸ್ಪತ್ರೆಯಲ್ಲಿ ಸಿಗದ ಸ್ಪಂದನೆ

ಉಡುಪಿ: ಕೆಲಸ ಮಾಡುತ್ತಿದ್ದಾಗ ಬಿದ್ದು ತೀವ್ರವಾಗಿ ಗಾಯಗೊಂಡ ವ್ಯಕ್ತಿಗೆ ಆಸ್ಪತ್ರೆಗಳಲ್ಲಿ ಸರಿಯಾಗಿ ಚಿಕಿತ್ಸೆ ಲಭಿಸದೆ ಪರದಾಟ ನಡೆಸಿದ್ದು, ಸಮಾಜ ಸೇವಕ ವಿಶು ಶೆಟ್ಟಿ ಅವರು ಭಾನಿವಾರ ನಸುಕಿನಲ್ಲಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸುವ ಮೂಲಕ ಮಾನವೀತೆ ತೋರಿದ್ದಾರೆ.
ಗಂಗೊಳ್ಳಿ ಮೂಲದ ಗಣೇಶ್​ ಆಚಾರ್ಯ (48) ಎಂಬವರು ಬಿದ್ದು ತೀವ್ರ ಗಾಯಗೊಂಡಿದ್ದರು. ಪೆಟ್ಟಾದ ಪತಿಯನ್ನು ತುರ್ತು ಶಸ್ತ್ರಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್​ ಆಸ್ಪತ್ರೆಗೆ ಪತ್ನಿ ಕರೆದುಕೊಂಡು ಹೋಗಿದ್ದರು. ಆಸ್ಪತ್ರೆಯಲ್ಲಿ ಬಹಳ ಹೊತ್ತು ಕಾದರೂ ಯಾರೂ ಸ್ಪಂದಿಸಲಿಲ್ಲ. 
ಅಲ್ಲಿನ ಸಿಬ್ಬಂದಿ ಖಾಸಗಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದರಿಂದ ಒಂಟಿ ಮಹಿಳೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಪತಿಯನ್ನು ಕರೆದುಕೊಂಡು ಹೋದರು. ಆದರೆ, ಗಾಯಾಳುವಿನ ಆಧಾರ್​ಗೆ ಫೋನ್​ ನಂಬರ್​ ಲಿಂಕ್​ ಇಲ್ಲ ಎಂದು ಆಯುಷ್ಮಾನ್​ ಚಿಕಿತ್ಸೆ ನಿರಾಕರಿಸಿದರು. ಚಿಕಿತ್ಸೆಗೆ 4ರಿಂದ 5 ಲಕ್ಷ ರೂ. ಆಗುತ್ತದೆಂದು ತಿಳಿಸಿದರು.
ಬಿದ್ದು ಗಾಯಗೊಂಡ ಪತಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ಮಂಗಳೂರಿನಲ್ಲಿ ಪರದಾಡಿದ ರೋಗಿಯ ಪತ್ನಿ.
ಮಧ್ಯರಾತ್ರಿ ಅಲೆದಾಟ
ತನ್ನ ಪತಿಗೆ ಸಕಾಲಕ್ಕೆ ಚಿಕಿತ್ಸೆ ಲಭಿಸದ್ದರಿಂದ ಹಾಗೂ 4-5 ಲಕ್ಷ ರೂ. ಇಲ್ಲದ್ದರಿಂದ ಅಸಹಾಯಕಳಾದ ಪತ್ನಿ ಶನಿವಾರ ಮಧ್ಯರಾತ್ರಿಯಲ್ಲಿ ಮತ್ತೆ ವೆನ್ಲಾಕ್​ ಆಸ್ಪತ್ರೆಗೆ ಬಂದು, ಪತಿಯನ್ನು ಚಿಕಿತ್ಸೆಗಾಗಿ ದಾಖಲಿಸುವಂತೆ ವಿನಂತಿಸಿದರು. ಆದರೆ, ಕರುಣೆ ತೋರದ ಅಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ನಿರಾಕರಿಸಿದರು. ಬೆಳಗಿನವರೆಗೆ ಅವಕಾಶ ಕೊಡಿ, ನಾನೊಬ್ಬಳೇ ಇದ್ದೇನೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ದಯವಿಟ್ಟು ಸ್ಪಂದಿಸಿ ಎಂದರೂ ಯಾರ ಮನಸ್ಸೂ ಕರಗಲಿಲ್ಲ. ಬಳಿಕ ತಡರಾತ್ರಿಯಲ್ಲಿಯೇ ಉಡುಪಿಯ ವಿಶು ಶೆಟ್ಟಿ ಅಂಬಲಪಾಡಿ ಅವರಲ್ಲಿ ಮಹಿಳೆ ನೆರವು ಯಾಚಿಸಿದರು.

ವಿಶು ಶೆಟ್ಟಿ ಸ್ಪಂದನೆ

ಕೂಡಲೇ ಸ್ಪಂದಿಸಿದ ವಿಶು ಶೆಟ್ಟಿ, ಖಾಸಗಿ ಆಂಬುಲೆನ್ಸ್​ ಮುಖಾಂತರ ರೋಗಿಯನ್ನು ಮಂಗಳೂರಿನಿಂದ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆತಂದು, ತೀವ್ರ ನಿಗಾ ಘಟಕದಲ್ಲಿ ದಾಖಲು ಮಾಡಿದರು. ಮಲ್ಪೆ ರವಿ ಅವರ ಸಹಾಯದಿಂದ ರೋಗಿಯ ಆಧಾರ್​ಗೆ ಫೋನ್​ ನಂಬರ್​  ಅಪ್ಡೇಟ್​ ಮಾಡಿಸಿಕೊಟ್ಟರು. ವೆನ್ಲಾಕ್​ ಆಸ್ಪತ್ರೆಯ ನಿರ್ಲಕ್ಷ್ಯವನ್ನು ಗಾಯಾಳುವಿನ ಪತ್ನಿ ಕಟುವಾಗಿ ಖಂಡಿಸಿದ್ದಾರೆ.
"

ಮಂಗಳೂರು ವೆನ್ಲಾಕ್​ ಆಸ್ಪತ್ರೆಯ ಸಿಬ್ಬಂದಿ, ವೈದ್ಯರ ನಿರ್ಲಕ್ಷ್ಯದಿಂದ ಇದೀಗ ರೋಗಿ ಚಿಂತಾಜನಕ ಸ್ಥಿತಿಗೆ ತಲುಪಿದ್ದು ಜೀವನ್ಮರಣ ಹೋರಾಟದಲ್ಲಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲೂ ಆಯುಷ್ಮಾನ್​ ಭಾರತ್​ ಯೋಜನೆಯಡಿ ಚಿಕಿತ್ಸೆಗೆ ಒಟಿಪಿ ಸಮಸ್ಯೆ ಎದುರಾಗಿದ್ದರಿಂದ ಆ ಮಹಿಳೆ ತನ್ನ ಪತಿಗೆ ಚಿಕಿತ್ಸೆ ಕೊಡಿಸಲು ದಿನವಿಡೀ ಆಂಬುಲೆನ್ಸ್​ನಲ್ಲಿ ತಿರುಗಾಡಿದ್ದಾಳೆ. ಇದೆಂತಹ ವ್ಯವಸ್ಥೆ ನಮ್ಮಲ್ಲಿದೆ? ರೋಗಿಯ ಜೀವಕ್ಕಿಂತ ಆಸ್ಪತ್ರೆಯವರಿಗೆ ದುಡ್ಡೇ ಹೆಚ್ಚಾಯಿತೇ?

— ವಿಶು ಶೆಟ್ಟಿ ಅಂಬಲಪಾಡಿ. ಸಮಾಜಸೇವಕ.