ಉಡುಪಿಯ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಡಾ.ವಿಶಾಲ್​ ಆರ್​. ಮಾತನಾಡಿದರು. ಸ್ವರೂಪಾ ಟಿ.ಕೆ., ಪ್ರತೀಕ್​ ಬಾಯಲ್​, ಸುಧಾಕರ್​ ನಾಯಕ್​, ರಶ್ಮಿ ಇತರರಿದ್ದರು. 
ಉಡುಪಿ

ಎಲ್ಲ ಕುಟುಂಬಕ್ಕೂ ತಲುಪಲಿ ಪಿಎಂ ವಿಮೆ

* ಕಾರ್ಯದರ್ಶಿ ಡಾ.ವಿಶಾಲ್​ ಆರ್​. ಸೂಚನೆ

* ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ

ಉಡುಪಿ: ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಗಳು ಎಲ್ಲರ ಕುಟುಂಬಕ್ಕೆ ಕನಿಷ್ಠ ವೆಚ್ಚದಲ್ಲಿ ಹೆಚ್ಚಿನ ಆರ್ಥಿಕ ಭದ್ರತೆ ಒದಗಿಸುತ್ತದೆ. ಅದನ್ನು ಪ್ರತಿ ಕುಟುಂಬವೂ ಹೊಂದುವಂತಾಗಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿಯ ಕಾರ್ಯದರ್ಶಿ ಡಾ. ವಿಶಾಲ್​ ಆರ್​. ಸೂಚಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ (ಮೇ 11) ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಜನರ ಜೀವನದ ಅನಿಶ್ಚಿತತೆಯ ವಿರುದ್ಧ ರಕ್ಷಣೆಗಾಗಿಯೇ ಈ ಎರಡು ವಿಮಾ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಅನಿರೀಕ್ಷಿತ ಅಪಘಾತ, ಅಂಗವೈಕಲ್ಯಗಳ ವಿರುದ್ಧ ಆರ್ಥಿಕ ರಕ್ಷಣೆ ಲಭಿಸುತ್ತದೆ ಎಂದರು.

ಕಡ್ಡಾಯ ನೋಂದಣಿ ಮಾಡಿ

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಹಾಗೂ ಸರ್ಕಾರಿ ನೌಕರರು ಕಡ್ಡಾಯವಾಗಿ ಈ ಯೋಜನೆಯ ನೋಂದಣಿ ಮಾಡಿಸಿಕೊಳ್ಳಬೇಕು. ಒಂದೊಮ್ಮೆ ಅಪಘಾತದಲ್ಲಿ ಮರಣ ಸಂಭವಿಸಿದರೆ 40 ಲಕ್ಷಕ್ಕೂ ಹೆಚ್ಚು ಹಣ ತಮ್ಮ ಕುಟುಂಬದವರಿಗೆ ದೊರೆಯುತ್ತದೆ. ಹೊರಗುತ್ತಿಗೆ ನೌಕರರನ್ನೂ ಸಹ ಯೋಜನೆಯ ವ್ಯಾಪ್ತಿಗೆ ಸೇರಿಸಬೇಕು. ಜಿಲ್ಲಾ ಲೀಡ್​ ಬ್ಯಾಂಕ್​ನ ವ್ಯವಸ್ಥಾಪಕರು ಈ ಬಗ್ಗೆ ಕ್ರಮ ವಹಿಸಿಬೇಕು ಎಂದು ಸೂಚಿಸಿದರು.

ಅಧಿಕಾರಿಗಳಿಗೆ ವಿವಿಧ ಸಲಹೆ

ಕುಡಿಯುವ ನೀರು ಒದಗಿಸುವ ಜಲ ಜೀವನ ಮಿಷನ್​ ಯೋಜನೆಯ ಮಾಹಿತಿ ಪಡೆದು, ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಬಾಕಿ ಉಳಿದಿರುವ ವಾರಾಹಿ ಯೋಜನೆಯ ಕಾಮಗಾರಿ ಪೂರ್ಣಗೊಳಿಸಬೇಕು. ವಿಶೇಷವಾಗಿ ಜಿಲ್ಲೆಯಲ್ಲಿರುವ ಕೊರಗ ಸಮುದಾಯದವರು ಆರೋಗ್ಯ ಸೇವೆಗಳ ಲಾಭ ಪಡೆಯಲು ಆಶಾ ಹಾಗೂ ಆರೋಗ್ಯ ಸಿಬ್ಬಂದಿ ಮುತುವರ್ಜಿ ವಹಿಸಬೇಕು. ಕೊಚ್ಚಿನ್​ ಶಿಪ್​ಯಾರ್ಡ್​ನ ಕಾರ್ಯವ್ಯಾಪ್ತಿ ಹೆಚ್ಚಿಸಲು ಅಗತ್ಯ ಸೌಕರ್ಯ ಒದಗಿಸಿ ಸ್ಥಳೀಯರಿಗೆ ಉದ್ಯೋಗಾವಕಾಶ ಲಭಿಸುವಂತೆ ಕ್ರಮವಾಗಬೇಕು. ಅದಕ್ಕೆ ಪೂರಕವಾಗಿ ಐಟಿಐನಲ್ಲಿ ವೃತ್ತಿ ತರಬೇತಿ ನೀಡಬೇಕು ಎಂದು ಡಾ.ವಿಶಾಲ್​ ಆರ್​. ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಪಂ ಸಿಇಒ ಪ್ರತೀಕ್​ ಬಾಯಲ್​, ಎಎಸ್ಪಿ ಸುಧಾಕರ್​ ನಾಯಕ್​, ಸಹಾಯಕ ಕಮಿಷನರ್​ ರಶ್ಮಿ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಕೊಲ್ಲೂರಲ್ಲಿ ವರ್ಟಿಕಲ್​ ಪಾರ್ಕಿಂಗ್​
ಪ್ರವಾಸೋದ್ಯಮದಿಂದ ಸ್ಥಳೀಯರಿಗೆ ಹೆಚ್ಚು ಉದ್ಯೋಗಾವಕಾಶ ಲಭಿಸುತ್ತದೆ. ಅದಕ್ಕೆ ಪೂರಕವಾಗಿ ಕಡಲ ಕಿನಾರೆ, ಧಾರ್ಮಿಕ ಕೇಂದ್ರ ಹಾಗೂ ನೈಸರ್ಗಿಕ ಸ್ಥಳಗಳು ಜಿಲ್ಲೆಯಲ್ಲಿ ಬಹಳ ಇದ್ದು ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಧಾರ್ಮಿಕ ಕೇಂದ್ರಗಳಿಗೆ ಬರುವ ಭಕ್ತರಿಗೆ ದೇವರ ದರ್ಶನ ಹಾಗೂ ಪ್ರಸಾದ ವಿತರಣೆ ವ್ಯವಸ್ಥಿತವಾಗಿ ಆಗಬೇಕು. ಅದಕ್ಕೆ ಅಗತ್ಯವಿರುವ ಮೂಲ ಸೌಕರ್ಯ ಕಲ್ಪಿಸಲು ದೇವಸ್ಥಾನಗಳಲ್ಲಿರುವ ಅನುದಾನ ಬಳಸಿಕೊಳ್ಳಬೇಕು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಕೇಂದ್ರ ಭಾಗದಲ್ಲಿರುವ ಸ್ಥಳವನ್ನು ಸಮರ್ಪಕವಾಗಿ ಅಭಿವೃದ್ಧಿ ಪಡಿಸಬೇಕು. ಅಲ್ಲಿಗೆ ಬರುವ ವಾಹನಗಳ ನಿಲ್ದಾಣಕ್ಕೆ ಅನುಕೂಲವಾಗಲು ವರ್ಟಿಕಲ್​ ಪಾರ್ಕಿಂಗ್​ ವ್ಯವಸ್ಥೆ ಮಾಡಬೇಕು ಎಂದು ಡಾ.ವಿಶಾಲ್​ ಆರ್​. ಸಲಹೆ ನೀಡಿದರು.