ಉಡುಪಿಯ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯರಿಗೆ ಡಾ. ವಿದ್ಯಾ ಪ್ರತಾಪ್ ಆರೋಗ್ಯ ಮಾಹಿತಿ ನೀಡಿದರು. ಡಾ.ಅರುಣಿಮಾ ಕೆ.ವಿ. ಇದ್ದರು.
* ಉಡುಪಿಯಲ್ಲಿ ಡಾ. ವಿದ್ಯಾ ಪ್ರತಾಪ್ ಮಾಹಿತಿ
* ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಜಾಗೃತಿ
ಉಡುಪಿ: ಯುವತಿ ಮತ್ತು ಮಹಿಳೆಯರು ಋತುಚಕ್ರದ ಸಂದರ್ಭದಲ್ಲಿ ಬಳಸುವ ಸ್ಯಾನಿಟರಿ ಪ್ಯಾಡ್ಗಳು ಪ್ಲಾಸ್ಟಿಕ್ ಮತ್ತು ರಾಸಾಯನಿಕಯುಕ್ತ ಪದಾರ್ಥ ಹೊಂದಿರುತ್ತವೆ. ಅವುಗಳ ಬಳಕೆ ಆರೋಗ್ಯಕ್ಕೆ ಮಾರಕ. ಅಲ್ಲದೆ, ಇಂತಹ ಪ್ಯಾಡ್ಗಳ ತ್ಯಾಜ್ಯ ವಿಲೇವಾರಿ ಕಾರ್ಯವೂ ಸಹ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗುತ್ತಿದೆ. ಹೀಗಾಗಿ ಎಲ್ಲ ವಿದ್ಯಾರ್ಥಿನಿಯರೂ ಆರೋಗ್ಯಕ್ಕೆ ತೊಡಕಾದ ಕಾಟನ್ ಪ್ಯಾಡ್ಗಳನ್ನೇ ಬಳಸಬೇಕು ಎಂದು ಮಣಿಪಾಲದ ಟಿ.ಎ. ಪೈ ಮೆನೇಜ್ಮೆಂಟ್ ಇನ್ಸ್ಟಿಟ್ಯೂಟ್ನ ಪ್ರಾಧ್ಯಾಪಕಿ ಡಾ. ವಿದ್ಯಾ ಪ್ರತಾಪ್ ತಿಳಿಸಿದರು.
ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆರೋಗ್ಯ ಮತ್ತು ಸ್ವಚ್ಛತಾ ವಿಭಾಗವು ಸೀತಾಲಕ್ಷ್ಮೀ ಮತ್ತು ಬಿ.ಎಂ. ರಾಮಕೃಷ್ಣ ಹತ್ವಾರ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಕಾಲೇಜಿನಲ್ಲಿ 586 ವಿದ್ಯಾರ್ಥಿನಿಯರು ಇದ್ದಾರೆ. ಖುತುಚಕ್ರ ಸಮಯದಲ್ಲಿ ಪ್ರತಿ ತಿಂಗಳಿಗೆ 12 ಸ್ಯಾನಿಟರಿ ಪ್ಯಾಡ್ ಬಳಸಿದರೂ ವರ್ಷಕ್ಕೆ 84,384 ಪ್ಯಾಡ್ಗಳು ಪ್ಲಾಸ್ಟಿಕ್ ತ್ಯಾಜ್ಯವಾಗಿ ಪರಿಸರ ಸೇರುವಂತಾಗುತ್ತದೆ. ಇದೊಂದು ಗಂಭೀರವಾದ ತ್ಯಾಜ್ಯ ನಿರ್ವಹಣೆಯ ಸಮಸ್ಯೆಯಾಗುತ್ತಿದೆ ಎಂದು ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿಕೊಟ್ಟರು.
ಡಾ.ಅರುಣಿಮಾ ಕೆ.ವಿ. ಮಾತನಾಡಿ, ಸ್ಯಾನಿಟರಿ ಪ್ಯಾಡ್ ಬಳಕೆಯಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ಮತ್ತು ಆರೋಗ್ಯದ ಮೇಲಿನ ದುಷ್ಪರಿಣಾಮ ತಿಳಿಸಿದರು. ಅಲ್ಲದೆ, ಗರ್ಭಕೋಶ ಮತ್ತು ಅದರ ಸ್ವಚ್ಛತೆಯ ಕುರಿತಂತೆ ವಿವರವಾದ ಮಾಹಿತಿ ನೀಡಿದರು.
ಕೊಯಮತ್ತೂರಿನ ಜೆನಿಸಿಸ್ ಪೆ. ಪ್ಯಾಕೇಜಿಂಗ್ ಲಿ. ಕಂಪನಿಯ ಪ್ರಾಯೋಜಕತ್ವದಲ್ಲಿ ಕಾಲೇಜಿನ ಎಲ್ಲ ವಿದ್ಯಾರ್ಥಿನಿಯರಿಗೂ ಹತ್ತಿಬಟ್ಟೆಯಿಂದ ತಯಾರಿಸಿದ ಪರಿಸರ ಸ್ನೇಹಿ ಪ್ಯಾಡ್ಗಳನ್ನು ಉಚಿತವಾಗಿ ವಿತರಿಸಲಾಯತು.
ಉಪನ್ಯಾಸಕಿ ಗಿರಿಜಾ ಹೆಗಡೆ ಸ್ವಾಗತಿಸಿದರು. ಕಾಲೇಜಿನ ಆರೋಗ್ಯ ಮತ್ತು ಸ್ವಚ್ಛತಾ ವಿದ್ಯಾರ್ಥಿ ಪ್ರತಿನಿಧಿಗಳಾದ ಸತ್ಯಾ, ಶಾಶ್ವತಿ, ಗ್ರೀಷ್ಮಾ, ಎನ್ಎಸ್ಎಸ್ನ ಪ್ರತಿಭಾ ಪಾಲ್ಗೊಂಡಿದ್ದರು.
"
ತ್ಯಾಜ್ಯ ನಿರ್ವಹಣೆಯ ಕುರಿತು ಡಾಕ್ಟರೇಟ್ ಪದವಿ ಗಳಿಸಿರುವ ಡಾ. ವಿದ್ಯಾ ಪ್ರತಾಪ್ ಅವರು ಈ ರೀತಿಯ ಸಮಾಜ ಸೇವೆ ಮಾಡುತ್ತಿರುವುದು ಶ್ಲಾಘನೀಯ. ಕಾಲೇಜು ವಿದ್ಯಾರ್ಥಿನಿಯರಿಗೆ ಇದು ಅತ್ಯಂತ ಪ್ರಯೋಜನಕಾರಿಯಾಗಿದೆ. ಹೆಣ್ಣು ಮಕ್ಕಳು ತಮ್ಮ ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸಬೇಕು.
— ಜಗದೀಶ್ ಕುಮಾರ್. ಕಾಲೇಜಿನ ಪ್ರಾಂಶುಪಾಲ.