ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ಟಿ-20 ವಿಶ್ವಕಪ್ ಗೆದ್ದ ಅಂಧರ ಮಹಿಳಾ ಕ್ರಿಕೆಟ್ ತಂಡದ ಸದಸ್ಯೆಯರಿಗೆ ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ಅನುಗ್ರಹ ಮಂತ್ರಾಕ್ಷತೆ ನೀಡಿ, ಶುಭಹಾರೈಸಿದರು.
* ಪರ್ಯಾಯ ಶೀರೂರು ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ
ಉಡುಪಿ: ಉಡುಪಿ ಶ್ರೀಕೃಷ್ಣ ಮಠಕ್ಕೆ ಟಿ-20 ವಿಶ್ವ ಕಪ್ ಗೆದ್ದ ಭಾರತದ ಅಂಧರ ಮಹಿಳಾ ಕ್ರಿಕೆಟ್ ತಂಡದ ಸದಸ್ಯೆಯರು ಶನಿವಾರ (ಫೆ.7) ಮಧ್ಯಾಹ್ನ ಭೇಟಿ ನೀಡಿದರು. ಮಠದ ಆಡಳಿತ ಮಂಡಳಿಯವರು ವಿಜೇತ ತಂಡವನ್ನು ಸಂಭ್ರಮದಿಂದ ಬರಮಾಡಿಕೊಂಡರು.
ಕನಕನ ಕಿಂಡಿಯ ಮೂಲಕ ಕ್ರೀಡಾಳುಗಳು ಶ್ರೀಕೃಷ್ಣ ದೇವರಿಗೆ ಕೈ ಮುಗಿದರು. ಬಳಿಕ ಮಠದ ಒಳಗೂ ತೆರಳಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರಿಗೆ ಕೈಮುಗಿದರು.
ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ಎಲ್ಲ ಕ್ರೀಡಾಳುಗಳನ್ನು ಗೌರವಿಸಿದರು. ಮಂತ್ರಾಕ್ಷತೆ ನೀಡಿ, ಕ್ರೀಡಾಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಆಶೀರ್ವದಿಸಿದರು. ಸ್ವಲ್ಪ ಸಮಯ ಶ್ರೀಗಳೊಂದಿಗೆ ಹಾಗೂ ಶಾಸಕ ಯಶ್ಪಾಲ್ ಸುವರ್ಣ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಶ್ರೀಕೃಷ್ಣ ಮಠದಲ್ಲಿ ಪ್ರಸಾದ ಸ್ವೀಕರಿಸಿದ ತಂಡ, ಮಣಿಪಾಲಕ್ಕೆ ತೆರಳಿತು. ಫೆ.8 ರಂದು (ಇಂದು) ಬೆಳಗ್ಗೆ ನಡೆಯಲಿರುವ ಮಣಿಪಾಲ್ ಮ್ಯಾರಥಾನ್ನಲ್ಲಿ ಭಾಗಿಯಾಗಲಿದ್ದಾರೆ.