ಕರ್ನಾಟಕ ಸಂಘ ಕತಾರ್ನ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಹಾಗೂ ಪದಾಧಿಕಾರಿಗಳು ಭಾರತೀಯ ರಾಯಭಾರ ಕಚೇರಿಯ ಕಾರ್ಯದರ್ಶಿ ಹರೀಶ್ ಪಾಂಡೆ ಅವರಿಗೆ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌವಿಸಿದರು.
* ಕರ್ನಾಟಕ ಸಂದ ಅಧ್ಯಕ್ಷ ಸುಬ್ರಹ್ಮಣ್ಯ ಎಚ್. ಮಾಹಿತಿ
* ಭಾರತೀಯ ರಾಯಭಾರ ಕಚೇರಿಯ ಸಹಕಾರ ಭರವಸೆ
ಉಡುಪಿ: ಪಶ್ಚಿಮ ಏಷ್ಯಾದ ಪ್ರಮುಖ ದೇಶವಾಗಿರುವ ಕತಾರ್ನ ಸ್ಥಳೀಯ ಶಾಲೆಗಳಲ್ಲಿ ಕನ್ನಡ ಭಾಷೆ ಅನುಷ್ಠಾನಕ್ಕೆ ಭಾರತೀಯ ರಾಯಭಾರ ಕಚೇರಿಯು ಬೆಂಬಲ ವ್ಯಕ್ತಪಡಿಸಿದೆ. ಇದು ಕತಾರ್ನಲ್ಲಿರುವ ಕನ್ನಡ ಮಾತನಾಡುವ ಅನಿವಾಸಿ ಭಾರತೀಯರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಆಕಾಂಕ್ಷೆಗಳಿಗೆ ಬಹುದೊಡ್ಡ ಉತ್ತೇಜನ ಸಿಕ್ಕಂತಾಗಿದೆ ಎಂದು ಕರ್ನಾಟಕ ಸಂಘ ಕತಾರ್ (ಕೆಎಸ್ಕ್ಯೂ)ನ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ತಿಳಿಸಿದ್ದಾರೆ.
ಕತಾರ್ ದೇಶದ ರಾಜಧಾನಿ ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ (ಶಿಕ್ಷಣ ಮತ್ತು ಸಾಂಸ್ಕೃತಿಕ) ಹರೀಶ್ ಪಾಂಡೆ ಅವರನ್ನು ಕರ್ನಾಟಕ ಸಂಘ ಕತಾರ್ನ ನೂತನ ವ್ಯವಸ್ಥಾಪನಾ ಸಮಿತಿಯೊಂದಿಗೆ ಭೇಟಿ ಮಾಡಿ ಈ ವಿಚಾರವಾಗಿ ಚರ್ಚಿಸಲಾಯಿತು. ಇಲ್ಲಿಯೂ ಸಹ ಕನ್ನಡ ಭಾಷಾ ತರಗತಿಗಳ ಆರಂಭಕ್ಕೆ ಸಂಬಂಧಿಸಿ ಅತ್ಯಂತ ಮಹತ್ವದ ಮತ್ತು ಐತಿಹಾಸಿಕ ಭರವಸೆ ಲಭಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಸಂಘದ ಅಧ್ಯಕ್ಷ ಹಾಗೂ ಎಲ್ಲ ಪಾದಾಧಿಕಾರಿಗಳ ಉಪಸ್ಥಿತಿಯಲ್ಲಿ ರಾಯಭಾರಿ ಕಚೇರಿಯಲ್ಲಿ ಸಭೆ ನಡೆಯಿತು. ಸಮಿತಿಯು 2026-28ನೇ ಸಾಲಿನಲ್ಲಿ ಕೈಗೊಳ್ಳಲಿರುವ ಶೈಕ್ಷಣಿಕ ಯೋಜನೆ, ವಿದ್ಯಾರ್ಥಿ ಒಕ್ಕೂಟ ಹಾಗೂ ಕನ್ನಡ ಭಾಷಾ ತರಗತಿಗಳ ಚೌಕಟ್ಟಿನ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.
ಸದಾ ಪ್ರೋತ್ಸಾಹ
ಕತಾರ್ನ ಕಾರ್ಯದರ್ಶಿ ಹರೀಶ್ ಪಾಂಡೆ ಮಾತನಾಡಿ, ಕತಾರ್ನ ಸ್ಥಳೀಯ ಶಾಲೆಗಳಲ್ಲಿ ಕನ್ನಡ ಭಾಷೆಯನ್ನೂ ಪಠ್ಯಕ್ರಮದ ಭಾಗವಾಗಿ ಅನುಷ್ಠಾನಗೊಳಿಸಲಾಗುವುದು. ಈ ಕುರಿತಂತೆ ಭಾರತೀಯ ರಾಯಭಾರ ಕಚೇರಿಯಿಂದ ಅಗತ್ಯವಿರುವ ಎಲ್ಲ ರೀತಿಯ ಆಡಳಿತಾತ್ಮಕ ಮತ್ತು ಸಾಂಸ್ಥಿಕ ಬೆಂಬಲ ನೀಡುವುದಾಗಿ ಘೋಷಿಸಿದರು. ಭಾರತದ ವೈವಿಧ್ಯಮಯ ಪರಂಪರೆ ಆಚರಿಸುವ ಸಮುದಾಯದ ಇಂತಹ ಪ್ರಯತ್ನಗಳಿಗೆ ರಾಯಭಾರ ಕಚೇರಿಯಿಂದ ಸದಾ ಪ್ರೋತ್ಸಾಹ ನೀಡಲಾಗುವುದು ಎಂದು ಭರವಸೆ ನೀಡಿದರು.
"
ಕತಾರ್ನಲ್ಲಿರುವ ಭಾರತೀಯ ರಾಯಭಾರಕಚೇರಿಯು ಕನ್ನಡಿಗರಿಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದೆ. ಮುಂದಿನ ಪೀಳಿಗೆಯ ಮಕ್ಕಳಲ್ಲಿ ಸಾಂಸ್ಕೃತಿಕ ಬೇರುಗಳನ್ನು ಉಳಿಸುವಲ್ಲಿ ಈ ಸಭೆಯು ಮಹತ್ವದ್ದಾಗಿದೆ. ಈ ಪ್ರಮುಖ ನಿರ್ಧಾರದಿಂದ ಅನಿವಾಸಿ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲೇ ವ್ಯವಸ್ಥಿತವಾಗಿ ಕನ್ನಡ ಕಲಿಯಲು ಉತ್ತಮ ಅವಕಾಶ ಲಭಿಸಲಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕ ಸಂಘ ಕತಾರ್ (ಕೆಎಸ್ಕ್ಯೂ) ಹಮ್ಮಿಕೊಳ್ಳುವ ಎಲ್ಲ ಶೈಕ್ಷಣಿಕ, ಸಾಮಾಜಿಕ ಹಾಗೂ ಸಮುದಾಯದ ಸಮಾಜಮುಖಿ ಕಾರ್ಯಗಳಿಗೂ ರಾಯಭಾರ ಕಚೇರಿಯ ಸಹಕಾರ ಲಭಿಸಲಿದೆ.
— ಸುಬ್ರಹ್ಮಣ್ಯ ಹೆಬ್ಬಾಗಿಲು. ಕರ್ನಾಟಕ ಸಂಘ ಕತಾರ್ನ ಅಧ್ಯಕ್ಷ.