ಉಡುಪಿಯ ರಾಜಾಂಗಣದಲ್ಲಿ ಶ್ರೀಕೃಷ್ಣ ಮಂತ್ರ ಲೇಖನ ಯಜ್ಞವನ್ನು ವೇದವರ್ಧನ ಶ್ರೀ ಉದ್ಘಾಟಿಸಿದರು. ಚಂಚಲಪತಿ ದಾಸ್​, ಗುರ್ಮೆ ಸುರೇಶ್​ ಶೆಟ್ಟಿ, ಯಶ್​ಪಾಲ್​ ಸುವರ್ಣ, ಡಾ. ಉದಯಕುಮಾರ್​ ಸರಳತ್ತಾಯ, ಅದ್ಯಪಾಡಿ ಹರಿದಾಸ ಭಟ್​ ಇದ್ದರು. 
ಉಡುಪಿ

ಭಗವಂತನ ಉಪಾಸನೆಯಿಂದ ಸಕಲ ದೋಷಗಳ ನಿವಾರಣೆ

* ಇಸ್ಕಾನ್​ನ ಚಂಚಲಪತಿ ದಾಸ್​ ಅಭಿಪ್ರಾಯ

* ಕೃಷ್ಣ ಮಂತ್ರ ಲೇಖನ ಯಜ್ಞನದ ಪುಸ್ತಕ ಬಿಡುಗಡೆ

ಉಡುಪಿ: ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣಾ ಎನಬಾರದೆ ಎಂದು ಪುರಂದರದಾಸರು ಅರುಹಿದ್ದರು. ಇಂದಿನ ಜನರಲ್ಲಿ ಅಧ್ಯಾತ್ಮ ಚಿಂತನೆ ಕುಸಿಯುತ್ತಿದೆ. ನಾವೆಲ್ಲ ಕಲಿಯುಗದಲ್ಲಿದ್ದು ದೋಷಗಳ ನಿಧಿಯೇ ಇದೆ. ಶ್ರೀಕೃಷ್ಣನ ಆರಾಧನೆ, ಉಪಾಸನೆ ಹಾಗೂ ಸ್ಮರಣೆಯಿಂದ ಸಕಲ ದೋಷಗಳಿಂದ ಮುಕ್ತವಾಗಬಹುದು ಎಂದು ಭಾಗವತದಲ್ಲಿ ಉಲ್ಲೇಖಿಸಲಾಗಿದೆ. ಅಂತಹ ಕೃಷ್ಣನ ಸ್ಮರಣೆಗಾಗಿ ಪರ್ಯಾಯ ಶೀರೂರು ಮಠ ಆರಂಭಿಸಿರುವ ಶ್ರೀಕೃಷ್ಣ ಮಂತ್ರ ಲೇಖನ ಯಜ್ಞ ಅತ್ಯಂತ ಸೂಕ್ತ ಮತ್ತು ಶ್ಲಾಘನೀಯ ಎಂದು ಇಸ್ಕಾನ್​ನ ಹಿರಿಯ ಉಪಾಧ್ಯಕ್ಷ ಚಂಚಲಪತಿ ದಾಸ್​ ಅಭಿಪ್ರಾಯಪಟ್ಟರು.
ಉಡುಪಿ ರಾಜಾಂಗಣದಲ್ಲಿ ಭಾನುವಾರ (ಮೇ 10) ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ಆರಂಭಿಸಿರುವ 'ಶ್ರೀಕೃಷ್ಣಾಯ ನಮ;' ಮಂತ್ರ-ಜಪ ಲೇಖನ ಯಜ್ಞನದ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಶ್ರೀಕೃಷ್ಣ ಮಂತ್ರ ಲೇಖನ ಯಜ್ಞದ ಪುಸ್ತಕವನ್ನು ಚಂಚಲಪತಿ ದಾಸ್​ ಬಿಡುಗಡೆ ಮಾಡಿದರು.

ಇಂದ್ರಿಯಗಳಿಗೆ ಕೃಷ್ಣ ಬಲ
ಆಶೀರ್ವಚನ ನೀಡಿದ ವೇದವರ್ಧನ ಶ್ರೀ, ನಮ್ಮ ಪರ್ಯಾಯದಲ್ಲಿ ಎಲ್ಲರೂ ಕೃಷ್ಣನನ್ನು ಸ್ಮರಿಸಬೇಕು ಎನ್ನುವುದೇ ನಮ್ಮ ಉದ್ದೇಶ. ಕೃಷ್ಣ ಮಂತ್ರ ಬರೆಯುವುದರಿಂದ ಇಂದ್ರಿಯಗಳಿಗೆ ಕೃಷ್ಣಬಲ ಲಭಿಸುತ್ತದೆ. ಮಂತ್ರ ಬರೆಯುವಾಗ ಮನಸ್ಸು, ಕಣ್ಣು, ಬಾಯಿ, ಕಿವಿ, ಕೈ ಸಹ ಶ್ರೀಕೃಷ್ಣನ ಸ್ಮರಣೆ ಮಾಡುತ್ತಿರುತ್ತದೆ. ಕಲಿಯುಗದಲ್ಲಿ ಕೃಷ್ಣ ಮಂತ್ರಕ್ಕೆ ಹೆಚ್ಚಿನ ಮಹತ್ವ ಇರುವುದನ್ನು ಮಧ್ವಾಚಾರ್ಯರೇ ತಿಳಿಸಿದ್ದಾರೆ. ಕೃಷ್ಣಾ ಎಂದು ನೆನೆದರೆ ಎಲ್ಲ ಪಾಪ-ಕಷ್ಟಗಳನ್ನೂ ನೀಗಿಸುತ್ತಾನೆ ಎಂದರು.

ಧಾರ್ಮಿಕ ಶಿಕ್ಷಣ ಅಗತ್ಯ

ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿ, ಭಾರತದಲ್ಲಿ ಜನಿಸಿರುವ ನಾವೆಲ್ಲರೂ ಪುಣ್ಯವಂತರು. ಪ್ರಸ್ತುತ ಕಾಲಟ್ಟದಲ್ಲಿ ಪಠ್ಯ ಶಿಕ್ಷಣದೊಂದಿಗೆ ಧಾರ್ಮಿಕ ಶಿಕ್ಷಣವೂ ಅಗತ್ಯವಾಗಿ ಬೇಕಾಗಿದೆ. ಅಂತಹ ಮಹತ್ವದ ಕಾರ್ಯಕ್ಕೆ ಪರ್ಯಾಯ ಶೀರೂರು ಮಠ ಮುಂದಾಗಿರುವುದು ಸಕಾಲಿಕವಾಗಿದೆ. ಕೃಷ್ಣ ಮಂತ್ರ ಲೇಖನ ಯಜ್ಞವು ಸಮಾಜಕ್ಕೆ ಇನ್ನಷ್ಟು ಧಾರ್ಮಿಕ ಬಲ ತುಂಬಲಿದೆ ಎಂದರು. 

ಮಂತ್ರ ದೀಕ್ಷೆ

ಮಂತ್ರ ಲೇಖನ ಯಜ್ಞ ಹಾಗೂ ಅಂತರ್ಜಾಲ ತಾಣಕ್ಕೆ ಚಾಲನೆ ನೀಡಿದ ವೇದವರ್ಧನ ಶ್ರೀಗಳು, 'ಶ್ರೀಕೃಷ್ಣಾಯ ನಮ;' ಮಂತ್ರ ಬೋಧಿಸಿ ಲೇಖನ ಯಜ್ಞದ ದೀಕ್ಷೆ ನೀಡಿದರು. ಸ್ವಯಂ ಮಂತ್ರ ಬರೆಯುವ ಮೂಲಕ ಲೇಖನ ಯಜ್ಞಕ್ಕೆ ಚಾಲನೆ ನೀಡಿದರು. ಅದ್ಯಪಾಡಿ ಹರಿದಾಸ ಭಟ್​ ಕೃಷ್ಣಮಂತ್ರದ ಮಹತ್ವ ತಿಳಿಸಿದರು.
ಆರ್​.ಸಾತ್ವಿಕ್​, ಎ.ಶ್ರೀನಿವಾಸನ್​ ಹಾಗೂ ಲವಕುಶ್​ ವೇದಘೋಷ ಪಠಿಸಿದರು. ಶೀರೂರು ಮಠದ ದಿವಾನ ಡಾ. ಉದಯಕುಮಾರ್​ ಸರಳತ್ತಾಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮಠದ ವಿದ್ವಾಂಸ ಡಾ. ಸಗ್ರಿ ಆನಂದ ತೀರ್ಥ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಸಂಕಲ್ಪದೊಂದಿಗೆ ದುರ್ಗುಣ ತ್ಯಜಿಸಿ

ಭಗವಂತನ ಪ್ರೀತಿ, ಅನುಗ್ರಹಕ್ಕಾಗಿ ದುರ್ಗುಣ ತ್ಯಜಿಸಿ ಒಳ್ಳೆಯ ಗುಣ ಅಳವಡಿಸಿಕೊಳ್ಳುತ್ತೇನೆ ಎಂಬ ಸಂಕಲ್ಪದೊಂದಿಗೆ ಶ್ರೀಕೃಷ್ಣ ಮಂತ್ರ ಲೇಖನ ಯಜ್ಞದಲ್ಲಿ ಪಾಲ್ಗೊಳ್ಳಬೇಕು. ರಾಮಾಯಣದಲ್ಲಿ ಕಪಿಗಳು ಕಲ್ಲಿನ ಮೇಲೆ ಶ್ರೀರಾಮ ಎಂದು ಬರೆದಿದ್ದರಿಂದ ಕಲ್ಲು ಮುಳುಗದೆ ಸೇತುವೆ ನಿರ್ಮಾಣವಾಯಿತು. ಅದರಂತೆ ನಾವುಗಳೂ ಸಹ ಕಲಿಯುಗದಲ್ಲಿ ಹಾಳೆಯ ಮೇಲೆ ಕೃಷ್ಣನ ಹೆಸರು ಬರೆಯುವ ಮೂಲಕ ಭವ ಬಂಧನದಿಂದ ಮುಕ್ತರಾಗೋಣ. 100 ಕೋಟಿ ಸಂಖ್ಯೆಯಲ್ಲಿ ಕೃಷ್ಣ ಮಂತ್ರ ಬರೆಸುವ ಯಜ್ಞಕ್ಕೆ ಭಕ್ತರೆಲ್ಲರೂ ಕೈಜೋಡಿಸಬೇಕು ಎಂದು ವೇದವರ್ಧನ ಶ್ರೀ ಕರೆ ನೀಡಿದರು.
"

ಅಧ್ಯಾತ್ಮವು ಈ ನಾಡಿನ ಅಸ್ಮಿತೆ, ಅಸ್ತಿತ್ವವಾಗಿದೆ. ಬದುಕಿನ ಸಂಚಾರದೊಂದಿಗೆ ಆಂತರಿಕ ಸಂಚಾರವೂ ಅತಿಮುಖ್ಯ. ಆ ನಿಟ್ಟಿನಲ್ಲಿ ಶೂನ್ಯದಿಂದ ಬಂದು ಅಂತಿಮವಾಗಿ ಶೂನ್ಯದೆಡೆಯೇ ಸಾಗುವ ನಮಗೆಲ್ಲ ಶ್ರೀಕೃಷ್ಣ ಮಂತ್ರ ಲೇಖನವು ಮೋಕ್ಷದ ಹಾದಿ ತೆರೆದಿಡಲಿದೆ.

— ಗುರ್ಮೆ ಸುರೇಶ್​ ಶೆಟ್ಟಿ. ಕಾಪು ಶಾಸಕ.