ವಿದ್ಯಾಪೋಷಕ್​ ಅಂತಿಮ ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಗಾರ 
ಉಡುಪಿ

ಅಂತಿಮ ಪದವಿ ವಿದ್ಯಾರ್ಥಿಗಳ ಸನಿವಾಸ ಶಿಬಿರ ಉದ್ಘಾಟನೆ

ಉಡುಪಿ: ಮೂಲ ವಿಜ್ಞಾನಕ್ಕೆ ಒತ್ತು ಕೊಡುವ ಅವಶ್ಯಕತೆ ಇದೆ. ಯಾವುದೇ ಪದವಿ ಕಲಿತರೂ ಅದರಲ್ಲಿ ಪಡೆಯುವ ಮೂಲಜ್ಞಾನ ಉದ್ಯೋಗಕ್ಕೆ ಸಹಕಾರಿಯಾಗುತ್ತದೆ. ಯಾವುದೇ ಉದ್ಯೋಗ ಮಾಡಿದರೂ ಶ್ರದ್ಧೆಯಿಂದ ಪೂರ್ಣತೆ ಸಾಧಿಸಬೇಕು ಎಂದು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಡಾ. ಎ. ಪಿ. ಭಟ್​ ಹೇಳಿದರು.
ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ವಿದ್ಯಾಪೋಷಕ್​ ಅಂತಿಮ ಪದವಿ ವಿದ್ಯಾರ್ಥಿಗಳ ಎರಡು ದಿನಗಳ ಶೈಕ್ಷಣಿಕ ಕಾರ್ಯಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಕುಲಸಚಿವ ಡಾ. ಚಂದ್ರಶೇಖರ ಶೆಟ್ಟಿ ಉದ್ಘಾಟಿಸಿ, ವಿದ್ಯಾರ್ಥಿಗಳು ಪಠ್ಯಕ್ಕೆ ಸೀಮಿತರಾಗದೆ, ತಮ್ಮ ಜ್ಞಾನ ವಿಕಾಸಕ್ಕೆ ಪೂರಕವಾಗುವ ಪುಸ್ತಕಗಳ ಓದನ್ನು ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು.

ಪೆಮ್​ ಸಂಸ್ಥೆಯ ಮುಖ್ಯಸ್ಥ ರತ್ನಕುಮಾರ್​, ಕಠಿಣ ಪರಿಶ್ರಮದಿಂದ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು. ಸಂಸ್ಥೆಯ ಕೋಶಾಧಿಕಾರಿ ಪ್ರ್ರೊ. ಕೆ. ಸದಾಶಿವ ರಾವ್​, ಹಿರಿಯರಾದ ಯು. ವಿಶ್ವನಾಥ ಶೆಣೈ, ಶಿಬಿರದ ನಿರ್ದೇಶಕ, ಮೈಲೈಫ್​ ಸಂಸ್ಥೆಯ ಸ್ಥಾಪಕ ಪ್ರವಿಣ್​ ಗುಡಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್​ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಅನಂತರಾಜ ಉಪಾಧ್ಯಾಯ, ಅಶೋಕ್​ ಎಂ. ಹಾಗೂ ಡಾ. ಪ್ರತಿಮಾ ಜೆ. ಆಚಾರ್ಯ ಸಹಕರಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್​ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು.