ಉಡುಪಿಯ ಯಕ್ಷಗಾನ ಕಲಾರಂಗದ ವತಿಯಿಂದ ನಿರ್ಮಿಸಿಕೊಟ್ಟ ಮನೆಯನ್ನು ಶಿಕ್ಷಕ ಸುರೇಂದ್ರ ನಾಯ್ಕ್ ಅವರಿಗೆ ವೆಂಕಟೇಶ್ ದಂಪತಿ ಹಸ್ತಾಂತರಿಸಿದರು. ಗುರುರಾಜ ಗಂಟಿಹೊಳೆ, ಎಂ. ಗಂಗಾಧರ ರಾವ್, ಪ್ರೊ. ಕೆ.ಸದಾಶಿವ ರಾವ್, ಯು. ವಿಶ್ವನಾಥ್ ಶೆಣೈ, ಯು.ಎಸ್. ರಾಜಗೋಪಾಲ್ ಆಚಾರ್ಯ, ಭುವನಪ್ರಸಾದ್ ಹೆಗ್ಡೆ, ಮುರಳಿ ಕಡೆಕಾರ್ ಇತರರಿದ್ದರು.
* ಬೆಂಗಳೂರಿನ ಎಸ್. ವೆಂಕಟೇಶ್ ಅಭಿಪ್ರಾಯ
* ಶಿಕ್ಷಕನಿಗೆ ನಿರ್ಮಿಸಿಕೊಟ್ಟ ಸಂಸ್ಥೆಯ 89ನೇ ಮನೆ ಹಸ್ತಾಂತರ
ಉಡುಪಿ: ಸೂಕ್ತ ಮನೆಯಿಲ್ಲದ ವಿದ್ಯಾಪೋಷಕ್ನ ಬಡ ವಿದ್ಯಾರ್ಥಿಗಳಿಗೆ ಮನೆ ನಿರ್ಮಿಸಿಕೊಡುತ್ತಿರುವ ಉಡುಪಿಯ ಯಕ್ಷಗಾನ ಕಲಾರಂಗದ ಕಾರ್ಯ ವರ್ಣಿಸಲಸಾಧ್ಯ. ಶಿಕ್ಷಕರೋರ್ವರಿಗೆ ಮನೆ ಕಟ್ಟಿಸಿಕೊಡುವ ಸಂಸ್ಥೆಯ ಸಾಮಾಜಿಕ ಕಳಕಳಿಯ ಕೆಲಸಕ್ಕೆ ಕೈಜೋಡಿಸಿ ಸಂತಸವಾಗಿದೆ. ಕಲಾರಂಗದ ಸಮಾಜಮುಖಿ ಕೆಲಸಗಳು ಅನ್ಯರ ಊಹೆಗೂ ನಿಲುಕದು ಎಂದು ಬೆಂಗಳೂರಿನ ಎಸ್.ವೆಂಕಟೇಶ್ ಅಭಿಪ್ರಾಯಪಟ್ಟರು.
ಏಳು ವರ್ಷದಿಂದ ನಡೂರಿನಲ್ಲಿ ಶ್ರೀವಾಣಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷೆಯ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸುರೇಂದ್ರ ನಾಯ್ಕ್ (ಎಂಎ, ಬಿ,ಇಡಿ) ಅವರಿಗೆ ಕುಂದಾಪುರ ತಾಲೂಕಿನ ಕೊಡ್ಲಾಡಿಯಲ್ಲಿ ತಮ್ಮ ಪ್ರಾಯೋಜಕತ್ವದಲ್ಲಿ ನಿರ್ಮಿಸಿಕೊಟ್ಟ 'ಶ್ರೀ ಬ್ರಹ್ಮಲಿಂಗೇಶ್ವರ' ಹೆಸರಿನ ಮನೆ (ಸಂಸ್ಥೆಯ 89ನೇ ಮನೆ)ಯನ್ನು ಪತ್ನಿ ನಂದಾ ಅವರೊಂದಿಗೆ ಸೋಮವಾರ (ಫೆ.23) ಉದ್ಘಾಟಿಸಿ ಮಾತನಾಡಿದರು.
ಭಾಗ್ಯದ ಮನೆ
ಶ್ರೀವಾಣಿ ವಿದ್ಯಾಭಿವೃದ್ಧಿ ಸಂಘ (ರಿ.) ನಡೂರಿನ ಗೌರವ ಮಾರ್ಗದರ್ಶಕ ಪ್ರೊ. ಸಖಾರಾಮ ಸೋಮಯಾಜಿ ಮಾತನಾಡಿ, ಮನೆ ಕಟ್ಟಲು ಆರಂಭಿಸಿ ಕೈಸಾಗದೆ ಶಿಕ್ಷಕ ಸುರೇಂದ್ರ ನಾಯ್ಕ್ ಕಂಗಾಲಾಗಿ ಕುಳಿತಿದ್ದರು. ಅವರಿಗೆ ಯಕ್ಷಗಾನ ಕಲಾರಂಗ ವನ್ನು ತೋರಿಸಿದೆ. ಕಷ್ಟಕ್ಕೆ ಸ್ಪಂದಿಸುವ ಸಂಸ್ಥೆಯಿಂದ ನಿರ್ಮಾಣಗೊಂಡ ಮನೆ, ನೊಂದ ಶಿಕ್ಷಕನಿಗೆ ಒದಗಿದ ಮಹಾ ಭಾಗ್ಯ ಎಂದರು.
ಸದಾ ಸ್ಮರಣೀಯರು
ಶಿಕ್ಷಕ ಸುರೇಂದ್ರ ನಾಯ್ಕ್ ಮಾತನಾಡಿ, ಸಾಲಮಾಡಿ ಆಡಂಬರದ ಮನೆ ಕಟ್ಟಿ ಸಾಲ ತೀರಿಸಲಾಗದೆ ನಿತ್ಯ ಪರದಾಡುವುದಕ್ಕಿಂತ ನಮ್ಮ ಇತಿಮಿತಿಯಲ್ಲಿ ಮನೆ ನಿರ್ಮಿಸಿ ಸುಖವಾಗಿ ಇರಬೇಕು ಎನ್ನುವುದನ್ನು ಕಲಾರಂಗ ನನಗೆ ಕಲಿಸಿದ ದೊಡ್ಡ ಪಾಠವಾಗಿದೆ. ದಾನಿಗಳಾದ ವೆಂಕಟೇಶ್ ದಂಪತಿಗೆ ನಮ್ಮ ಕುಟುಂಬ ಸದಾ ಋಣಿ. ಅವರೇ ನಮಗೆ ಸದಾ ಸ್ಮರಣೀಯರು ಎಂದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ಶ್ರೀವಾಣಿ ವಿದ್ಯಾಭಿವೃದ್ಧಿ ಸಂಘದ ಆಡಳಿತಾಧಿಕಾರಿ ಎಂ.ವಿಶ್ವನಾಥ ಶೆಟ್ಟಿ, ಹೆಪಿ ವರ್ಲ್ಡ್ನ ಪ್ರವರ್ತಕ ಸಂತೋಷ್ ಉಪಸ್ಥಿತರಿದ್ದರು.
ಸಂಸ್ಥೆಯ ಸದಸ್ಯರಾದ ಪ್ರೊ. ಕೆ.ಸದಾಶಿವ ರಾವ್, ಯು. ವಿಶ್ವನಾಥ್ ಶೆಣೈ, ಯು.ಎಸ್. ರಾಜಗೋಪಾಲ್ ಆಚಾರ್ಯ, ಭುವನಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯಾಯ, ಪ್ರಭಾಕರ್ ಬಂಡಿ, ಜಯರಾಮ ಪಡಿಯಾರ್, ವಿನೋದಾ ಎಂ., ಯಕ್ಷಗಾನ ಕಲಾವಿದ ಉಮೇಶ್ ನಾಯ್ಕ್, ಸಾಮಾಜಿಕ ಕಾರ್ಯಕರ್ತರಾದ ಪ್ರವೀಣ್ ಶೆಟ್ಟಿ, ವಿದ್ಯಾಧರ್ ಶೆಟ್ಟಿ ಪಾಲ್ಗೊಂಡಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರ್ವಹಿಸಿದರು.
ಯಕ್ಷಗಾನ ಕಲಾರಂಗದ ಕೆಲಸ ಅನುಕರಿಸಲಾಗದು. ಪ್ರಪಂಚದಲ್ಲಿ ಇಂತಹ ಇನ್ನೊಂದು ಸಂಘಟನೆ ಇಲ್ಲ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ. ಅವರಲ್ಲಿ ಸಮರ್ಥ ನಾಯಕತ್ವ, ಅರ್ಪಣಾ ಮನೋಭಾವದ ಕಾರ್ಯಕರ್ತರ ಪಡೆಯಿದ್ದು ಅಭಿನಂದನಾರ್ಹರು. ನನ್ನೊಂದಿಗೆ ಕೆಲಸ ಮಾಡುವ ಕಾರ್ಯಕರ್ತರಿಗೆ ಕಲಾರಂಗದ ಕಾರ್ಯ ವೈಖರಿ ಬಗ್ಗೆ ಆಗಾಗ ಉಲ್ಲೇಖಿಸುತ್ತೇನೆ.