ಉಡುಪಿಯ ಹಿರಿಯಡ್ಕದ ಕುದಿ ಫಾಮ್ರ್ನಲ್ಲಿ ಆಯೋಜಿಸಿದ್ದ ಕ್ಷೇತ್ರೋತ್ಸವವನ್ನು ಗುರುರಾಜ ತಂತ್ರಿ ಉದ್ಘಾಟಿಸಿದರು. ಕುದಿ ಶ್ರೀನಿವಾಸ ಭಟ್, ರಾಮಕೃಷ್ಣ ಶರ್ಮ ಬಂಟಕಲ್ಲು, ಶ್ರೀನಿವಾಸ ಬಲ್ಲಾಳ್, ಮಲ್ಲಂಪಳ್ಳಿ, ದಿನೇಶ್ ಶೆಟ್ಟಿ ಹೆರ್ಗ ಇತರರಿದ್ದರು.
* ಸಾಧನಶೀಲ ಕೃಷಿಕ ಕುದಿ ಶ್ರೀನಿವಾಸ ಭಟ್ ಎಚ್ಚರಿಕೆ
* ಉಡುಪಿಯ ಹಿರಿಯಡ್ಕದಲ್ಲಿ ಕೃಷಿ ಕ್ಷೇತ್ರೋತ್ಸವ
ಉಡುಪಿ: ಜಿಲ್ಲೆಯಲ್ಲಿ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದು, ಕೃಷಿಭೂಮಿ ಹಡೀಲು ಬೀಳುತ್ತಿದೆ. ಅದರಿಂದ ಇನ್ನಿತರ ಉದ್ದೇಶಗಳಿಗೆ ಫಲವತ್ತಾದ ಭೂಮಿಯೂ ಮಾರಾಟವಾಗುತ್ತಿದೆ. ಆಡಳಿತಗಾರರಲ್ಲಿಯೂ ಸಹ ಕೃಷಿಯ ಕುರಿತು ಆಳವಾದ ಹಾಗೂ ನಿಶ್ಚಿತ ಯೋಜನೆಗಳಿಲ್ಲ. ಸ್ಥಿತಿ ಹೀಗೆಯೇ ಮುಂದುವರಿದರೆ ಮುಂದೊಂದು ದಿನ ದೇಶದಲ್ಲಿ ಅನ್ನಕ್ಕೆ ಪರದಾಟ ಉಂಟಾಗಿ ಅನ್ಯರ ಹಂಗಿನಲ್ಲಿ ಬದುಕುವ ಪರಿಸ್ಥಿತಿ ಬರಬಹುದು. ಹೀಗಾಗಿ ಕೃಷಿ ಉಳಿದರೆ ಮಾತ್ರ ದೇಶ ಉಳಿದೀತು ಎಂದು ಸಾಧನಶೀಲ ಕೃಷಿಕ, ರಾಷ್ಟ್ರಪ್ರಶಸ್ತಿ ವಿಜೇತ ಕುದಿ ಶ್ರೀನಿವಾಸ ಭಟ್ ಎಚ್ಚರಿಕೆ ನೀಡಿದರು.
ಉಡುಪಿ ಜಿಲ್ಲಾ ಕೃಷಿಕ ಸಂಘವು ಹಿರಿಯಡ್ಕದ ಕುದಿ ಫಾಮ್ರ್ನಲ್ಲಿ ಶನಿವಾರ (ಮಾ.21) ಆಯೋಜಿಸಿದ್ದ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು.
ಹಿರಿಯಡ್ಕ ಗುರುರಾಜ ತಂತ್ರಿ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಮಾತನಾಡಿ, ವೈಜ್ಞಾನಿಕ ಕೃಷಿ ಮತ್ತು ಕೃಷಿ ಸಂಘಟನೆಯ ಅಗತ್ಯತೆ ತಿಳಿಸಿದರು.
ದಿನೇಶ್ ಶೆಟ್ಟಿ ಹೆರ್ಗ, ಪೆರಂಪಳ್ಳಿ ವಲಯದ ರವೀಂದ್ರ ಪೂಜಾರಿ ಶೀಂಬ್ರ, ಅಲೆವೂರು ಸುರೇಶ್ ನಾಯಕ್, ನರಸಿಂಹ ಕಾಮತ್ ಕರ್ವಾಲು, ವಿಠ್ಠಲ ನಾಯ್ಕ್ ಕೊಡಂಗಳ, ಉದ್ಯಾವರ ವಲಯದ ದಯಾನಂದ ಕೆ., ಜಯಲಕ್ಷ್ಮೀ ಪಿತ್ರೋಡಿ, ಭಾರತಿ ಶೆಟ್ಟಿ ಅಂಜಾರು ಇತರರು ಉಪಸ್ಥಿತರಿದ್ದರು.
ಕೃಷಿಕ ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರಂಬಳ್ಳಿ ವಲಯದ ಶ್ರೀಪತಿ ಭಟ್ ವಂದಿಸಿದರು. ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಪ್ರಾತ್ಯಕ್ಷಿಕೆ, ವಸ್ತು ಪ್ರದರ್ಶನ
ತೆಂಗು, ಅಡಕೆ, ಕಾಳಮೆಣಸು, ಮಲ್ಲಿಗೆ, ವಿವಿಧ ಹಣ್ಣಿನ ಗಿಡಗಳು, ಹೈನುಗಾರಿಕೆ, ಸಾವಯವ ಗೊಬ್ಬರ ತಯಾರಿ, ಕೋಳಿ ಸಾಕಣೆಯ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ನೀಡಲಾಯಿತು. ಅಡಕೆ ಸುಲಿಯುವ ಯಂತ್ರ ಸೇರಿದಂತೆ ಕೃಷಿ ಯಂತ್ರೋಪಕರಣ, ವಿವಿಧ ಕೃಷಿ ಪರಿಕರ, ಪುಸ್ತಕಗಳು, ಕಾಡುಪ್ರಾಣಿಗಳನ್ನು ಬೆದರಿಸುವ ಕೋವಿ ಇತ್ಯಾದಿ ಸಾಧನ-, ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು.