ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಸಮರ್ಪಿಸಿದ ಚಿನ್ನದ ಕಲಶ ಮತ್ತು ಸ್ವರ್ಣದ ಕೈಬಟ್ಟಲನ್ನು ದೇವಸ್ಥಾನದಲ್ಲಿ ಪ್ರದಕ್ಷಿಣೆ ಮಾಡಲಾಯಿತು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀ, ತಂತ್ರಿ ಉಳಿಯತ್ತಾಯ ವಿಷ್ಣು ಅಸ್ರ ಇತರರು ಇದ್ದರು.  
ಉಡುಪಿ

ಮಧೂರು ಕ್ಷೇತ್ರ ಅಭಿವೃದ್ಧಿ ಕಾರ್ಯ ಲೋಕಾರ್ಪಣೆ

ಇಂದಿರಾ ಎನ್ ಕೆ
ಕಾಸರಗೋಡು: ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ವಠಾರದಲ್ಲಿ ಎರಡು ಕಾಲು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ವಸಂತ ಪೂಜಾ ಕಾರ್ಯಕ್ರಮಗಳ ಉದ್ಘಾಟನೆ, ಶ್ರೀ ದೇವರಿಗೆ ಸ್ವರ್ಣದ ಕೈಬಟ್ಟಲು ಹಾಗೂ ಕಲಶಪಾತ್ರೆ ಸಮರ್ಪಣೆ ನೆರವೇರಿತು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕಾಮಗಾರಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ದೇವಸ್ಥಾನ ವಠಾರದಲ್ಲಿ 1.12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಬೊಡ್ಡಜ್ಜ ವಾಣಿಜ್ಯ ಸಂಕೀರ್ಣ, ಲಾಕರ್ ಕೊಠಡಿ, ಶೌಚಗೃಹ ಕಾಂಪ್ಲೆಕ್ಸ್, ಒಂದು ಕೋಟಿ ರೂ.ಗೂ ಹೆಚ್ಚು ಮೊತ್ತದಲ್ಲಿ ದೇಗುಲದ ಹೊರಾಂಗಣದಲ್ಲಿ ನಿರ್ಮಿಸಿದ ಶಾಶ್ವತ ಚಪ್ಪರ ಲೋಕಾರ್ಪಣೆ ಮಾಡಲಾಯಿತು. ಇದೇ ಸಂದರ್ಭ ಕಳೆದ ನಾಲ್ಕು ದಶಕಗಳಿಂದ ಭಕ್ತರು ದೇವಾಲಯಕ್ಕೆ ಕಾಣಿಕೆಯಾಗಿ ಸಮರ್ಪಿಸಿದ್ದ ಚಿನ್ನವನ್ನು ಶುದ್ಧೀಕರಿಸಿ ತಯಾರಿಸಲಾದ 89 ಗ್ರಾಂ ತೂಕದ ಚಿನ್ನದ ಕಲಶ ಹಾಗೂ 700 ಗ್ರಾಂ ತೂಕದ ಸ್ವರ್ಣದ ಕೈಬಟ್ಟಲನ್ನು ಶ್ರೀದೇವರಿಗೆ ಸಮರ್ಪಿಸಲಾಯಿತು. ಎಡನೀರು ಶ್ರೀಗಳು ಕ್ಷೇತ್ರದ ತಂತ್ರಿ ಉಳಿಯತ್ತಾಯ ವಿಷ್ಣು ಆಸ್ರ ಅವರಿಗೆ ಹಸ್ತಾಂತರಿಸಿದರು.
ಮಧೂರು ಗ್ರಾಪಂ ಅಧ್ಯಕ್ಷೆ ಸುಜ್ಞಾನಿ ಶ್ಯಾನುಭಾಗ್ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಪವಿತ್ರಪಾಣಿ ರತನ್‌ಕುಮಾರ್ ಕಾಮಡ, ಗ್ರಾಪಂ ಸದಸ್ಯ ಎಂ.ಆರ್.ಯೋಗೀಶ್, ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಪ್ರಸಾದ್ ಕೂಡ್ಲು, ವಿಷ್ಣು ಪ್ರಸಾದ್ ಹೆಬ್ಬಾರ್, ಜಯದೇವ ಖಂಡಿಗೆ, ಪ್ರಭಾಶಂಕರ್ ಮೊದಲಾದವರು ಉಪಸ್ಥಿತರಿದ್ದರು. ಗುಡ್ಡೆ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದ ವತಿಯಿಂದ ಭಜನೆ ನಡೆಯಿತು.