ರಾಜ್ಯದ ಮೊದಲ ಡಿಜಿಟಲ್ ಚೌಕ ಘಟಕವನ್ನು ಕುಂಬಳೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಚಿವ ಎನ್.ಶಂಸುದ್ದೀನ್ ಉದ್ಘಾಟಿಸಿದರು. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ಕಾಸರಗೋಡು ಶಾಸಕ ಕಲ್ಲಟ್ರ ಮಾಹಿನ್ ಮೊದಲಾದವರಿದ್ದರು.
ಕುಂಬಳೆ: ಕೇರಳದ ಹೊಸ ಯುಗಕ್ಕಾಗಿ ಸರ್ಕಾರದ 100 ದಿನಗಳ ಕ್ರಿಯಾ ಯೋಜನೆಯ ಭಾಗವಾಗಿ ಕೈಟ್ ಜಾರಿಗೆ ತಂದಿರುವ ವಿನೂತನ ಯೋಜನೆಯಾದ ಡಿಜಿಟಲ್ ಚೌಕದ ರಾಜ್ಯದ ಮೊದಲ ಘಟಕವನ್ನು ಶಿಕ್ಷಣ ಸಚಿವ ಎನ್.ಶಂಸುದ್ದೀನ್ ಕುಂಬಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಉದ್ಘಾಟಿಸಿದರು.
ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಶಾಸಕ ಕಲ್ಲಟ್ರ ಮಾಹಿನ್, ಜಿಪಂ ಅಧ್ಯಕ್ಷ ಸಾಬು ಅಬ್ರಹಾಂ ಮುಖ್ಯ ಅತಿಥಿಗಳಾಗಿದ್ದರು.
ಮಕ್ಕಳಲ್ಲಿ ಡಿಜಿಟಲ್ ಅಂತರ ಕಡಿಮೆ ಮಾಡುವುದು, ಡಿಜಿಟಲ್ ಸಾಧನಗಳನ್ನು ಸ್ವಯಂ ಅಧ್ಯಯನದ ಸಾಧನವನ್ನಾಗಿ ಮಾಡುವುದು ಮತ್ತು ಆರೋಗ್ಯಕರ ಡಿಜಿಟಲ್ ಬ್ರೌಸಿಂಗ್ ಸಂಸ್ಕೃತಿ ಹುಟ್ಟುಹಾಕುವ ಉದ್ದೇಶದಿಂದ ಕೈಟ್ ನೇತೃತ್ವದಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.
ಆಟಗಳು, ಸೃಜನಶೀಲತೆ, ಸ್ವ-ಅಧ್ಯಯನ ಮತ್ತು ಡಿಜಿಟಲ್ ಸಾಕ್ಷರತೆಯ ಮೂಲಕ ಕಲಿಕೆಯನ್ನು ಬೆಳೆಸುವುದರ ಜತೆಗೆ ಈ ಯೋಜನೆಯು ‘ಕಲಿಪೆಟ್ಟಿ’ ಮತ್ತು ‘ಇ-ವಿದ್ಯಾ’ ಅಂತಹ ಐಸಿಟಿ ಪಠ್ಯಪುಸ್ತಕಗಳನ್ನು ಇತರ ವಿಷಯಗಳ ಅಧ್ಯಯನಕ್ಕಾಗಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಹಾಯ ಮಾಡುತ್ತದೆ. ಅಂಗವಿಕಲ ಮಕ್ಕಳು ಸೇರಿದಂತೆ ಎಲ್ಲ ವಿದ್ಯಾರ್ಥಿಗಳು ಸುಲಭವಾಗಿ ಬಳಸಬಹುದಾಗಿದೆ.