ಅಮೆರಿಕದ ದಿ ಎಲ್ಸ್​ ಇನ್​ಸ್ಟಿಟ್ಯೂಟ್​ನ ಪ್ರಧಾನ ಸಂಶೋಧಕ ಡಾ. ಸುದರ್ಶನ್​ ಮೂರ್ತಿ ಸಮ್ಮೇಳನ ಉದ್ಘಾಟಿಸಿದರು. 
ಉಡುಪಿ

ಭಾರತೀಯ ಜ್ಞಾನ ಪರಂಪರೆ ಸಮಗ್ರ ತಿಳುವಳಿಕೆ ಅಗತ್ಯ

ಉಡುಪಿ: ಪ್ರಸ್ತುತ ಕಾಲಘಟ್ಟದಲ್ಲಿ ಭಾರತೀಯ ಜ್ಞಾನ ಪರಂಪರೆಯ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ಯುವಜನತೆ ನಮ್ಮ ಪ್ರಾಚಿನ ಜ್ಞಾನ ಪರಂಪರೆಯ ಮಹತ್ವವನ್ನು ಅರಿತುಕೊಳ್ಳುವುದು ಹಾಗೂ ಈ ಬಗ್ಗೆ ಸಮಗ್ರ ತಿಳುವಳಿಕೆಯನ್ನು ಬೆಳೆಸಿಕೊಳ್ಳುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಅಮೆರಿಕದ ದಿ ಎಲ್ಸ್​ ಇನ್​ಸ್ಟಿಟ್ಯೂಟ್​ನ ಪ್ರಧಾನ ಸಂಶೋಧಕ ಡಾ. ಸುದರ್ಶನ್​ ಮೂರ್ತಿ ಹೇಳಿದರು.

ಪೂರ್ಣಪ್ರಜ್ಞ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ ವತಿಯಿಂದ ನೇಪಾಳದ ಮಾಧೇಶ್​ ವಿಶ್ವವಿದ್ಯಾಲಯ ಸಹಯೋಗದಲ್ಲಿ ಆಯೋಜಿಸಲಾದ ಪ್ರಾಚಿನ ಜ್ಞಾನ, ಉದಯೋನ್ಮುಖ ಭವಿಷ್ಯ: ನಿರ್ವಹಣೆ, ಗಣಕವಿಜ್ಞಾನ, ಉನ್ನತ ಶಿಕ್ಷಣ ಮತ್ತು ಕಾರ್ಯತಂತ್ರ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನ ನಿರ್ದೇಶಕ ಡಾ. ಬಿ. ಗೋಪಾಲಾಚಾರ್ಯ ಮಾತನಾಡಿ, ಆಧುನಿಕ ಜೀವನದಲ್ಲಿ ಭಾರತೀಯತೆಗೆ ಸಂಬಂಧಿಸಿದ ಅನೇಕ ಮಹತ್ವದ ಸಂಗತಿಗಳನ್ನು ನಾವು ರ್ನಿಲಕ್ಷಿಸುತ್ತಿದ್ದೇವೆ ಅಥವಾ ಮರೆತುಬಿಡುತ್ತಿದ್ದೇವೆ. ನಮ್ಮ ಪ್ರಾಚಿನ ಜ್ಞಾನಸಂಪತ್ತಿನತ್ತ ಮತ್ತೊಮ್ಮೆ ದೃಷ್ಟಿ ಹರಿಸಿ, ಅದರ ಮಹತ್ವವನ್ನು ಅರಿತುಕೊಂಡಾಗ ಭಾರತದ ಶ್ರೀಮಂತ ಪರಂಪರೆಯ ಬಗ್ಗೆ ಹೆಮ್ಮೆ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.

ಗೌರವ ಅತಿಥಿಗಳಾದ ಸಿಎ ಟಿ. ಪ್ರಶಾಂತ್​ ಹೊಳ್ಳ, ಡಾ. ರಾಮನಾಥನ್​ ಶ್ರೀನಿವಾಸನ್​ ಹಾಗೂ ಪೂರ್ಣಪ್ರಜ್ಞ ಕಾಲೇಜಿನ (ಸ್ವಾಯತ್ತ) ಪ್ರಾಂಶುಪಾಲೆ ಡಾ. ವಿಜಯಲಕ್ಷ್ಮಿ ಸಿ. ಭಟ್​ ಶುಭ ಹಾರೈಸಿದರು. ಅದಮಾರು ಮಠ ಶಿಕ್ಷಣ ಮಂಡಳಿ ಗೌರವ ಕಾರ್ಯದರ್ಶಿ ಡಾ. ಎ. ಪಿ. ಭಟ್​ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪೂರ್ಣಪ್ರಜ್ಞ ಇನ್​ಸ್ಟಿಟ್ಯೂಟ್​ ಆಫ್​ ಮ್ಯಾನೇಜ್​ಮೆಂಟ್​ನ ನಿರ್ದೇಶಕ ಡಾ. ಪಿ. ಎಸ್​. ಐತಾಳ್​ ಸ್ವಾಗತಿಸಿದರು. ಸಮ್ಮೇಳನದ ಸಂಚಾಲಕ ಪ್ರೊ. ವೇಣುಗೋಪಾಲ ರಾವ್​ ಎ. ಎಸ್​. ಪ್ರಸ್ತಾವನೆಗೈದರು. ವಿದ್ಯಾರ್ಥಿನಿ ಪೂಜಾ ಹಾಗೂ ತಂಡದವರು ಪ್ರಾರ್ಥಿಸಿದರು. ಎಂಬಿಎ ವಿಭಾಗದ ಪ್ರಾಧ್ಯಾಪಕ ಪ್ರೊ. ಶಿವಾನಂದ ಎಂ. ಭಂಡಾರ್ಕರ್​ ನಿರೂಪಿಸಿದರು. ಸಮ್ಮೇಳನದ ಸಹ ಸಂಚಾಲಕರಾದ ಡಾ. ಭರತ್​ ವಿ. ವಂದಿಸಿದರು.

ಬಾಕ್ಸ್​

ತಾಂತ್ರಿಕ ಗೋಷ್ಠಿಗಳು ಮತ್ತು ಪ್ರಶಸ್ತಿ

ಅಮೆರಿಕ, ದಕ್ಷಿಣ ಆಫ್ರಿಕಾ, ಸೌದಿ ಅರೇಬಿಯಾ, ನೇಪಾಳ ಹಾಗೂ ಜಪಾನ್​ ದೇಶಗಳ ತಜ್ಞರಿಂದ ವಿಶೇಷ ಉಪನ್ಯಾಸಗಳು ನಡೆದವು. ಎರಡು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ಸುಮಾರು 40 ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಯಿತು. ಕೆ. ಗುರುರಾಜ ಭಟ್​, ದೀಕ್ಷಿತಾ ಹಾಗೂ ರಾಮಕೃಷ್ಣ ನಾಯಕ್​ ಅವರು ಮಂಡಿಸಿದ ಉಡುಪಿ ಜಿಲ್ಲೆಯ ಸಂಸತ ವಿದ್ವಾಂಸರ ಆದಾಯ ಮತ್ತು ಹೂಡಿಕೆ ವಿಶ್ಲೇಷಣೆಯ ಅಧ್ಯಯನ ಎಂಬ ಸಂಶೋಧನಾ ಪ್ರಬಂಧವು ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿಗೆ ಭಾಜನವಾಯಿತು.