ಮಣಿಪಾಲದ ಮಾಹೆ ವಿವಿಯಲ್ಲಿ ಟೆನ್ವಿಕ್​ ಸ್ಪೋರ್ಟ್ಸ್​ ಸಹಯೋಗದೊಂದಿಗೆ ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿ ಹೈ-ಪರ್ಫಾರ್ಮೆನ್ಸ್​ ಸೆಂಟರ್​ ಉದ್ಘಾಟಿಸಲಾಯಿತು. ಅನಿಲ್​ ಕುಂಬ್ಳೆ, ಡಾ. ಎಚ್​.ಎಸ್​. ಬಲ್ಲಾಳ್​, ಡಾ.ಎಂ.ಡಿ. ವೆಂಕಟೇಶ್​, ಡಾ. ಶರತ್​ ಕೆ. ರಾವ್​, ವಸಂತ್​ ಭಾರದ್ವಾಜ್​ ಹಾಗೂ ಮಾಹೆ ಉಪನ್ಯಾಸಕರು ಇದ್ದರು. 
ಉಡುಪಿ

ಕ್ರೀಡೋದ್ಯಮದಲ್ಲಿ ಸಮರ್ಥ, ವೃತ್ತಿಪರರ ಕೊರತೆ

* ಭಾರತದ ಕ್ರಿಕೆಟರ್​ ಅನಿಲ್​ ಕುಂಬ್ಳೆ ಅನಿಸಿಕೆ

* ಮಾಹೆ-ಟೆನ್ವಿಕ್​ ಸ್ಪೋರ್ಟ್ಸ್​ನ ಸೆಂಟರ್​ಗೆ ಚಾಲನೆ

ಉಡುಪಿ: ಭಾರತೀಯ ಕ್ರೀಡಾ ಇತಿಹಾಸದಲ್ಲಿ ಇದೊಂದು ಸ್ಮರಣೀಯ ದಿನ. ಕ್ರೀಡಾ ಉದ್ಯಮದಲ್ಲಿರುವ ಗಂಭೀರ ಸವಾಲಿಗೆ ನಾವು ಪರಿಹಾರ ಕಂಡುಕೊಳ್ಳುತ್ತಿದ್ದೇವೆ. ವೃತ್ತಿಪರ ಲೀಗ್​ಗಳು, ಕ್ರೀಡಾ ಸ್ಟಾರ್ಟಪ್​ ಮತ್ತು ನುರಿತ ತರಬೇತುದಾರರ ಬೇಡಿಕೆ ಹೆಚ್ಚುತ್ತಿದೆ. ಆದರೆ, ದೇಶವು ಕ್ರೀಡಾ ವ್ಯವಸ್ಥೆಯಲ್ಲಿ ಸಮರ್ಥ ಮತ್ತು ಉದ್ಯಮಕ್ಕೆ ಸಜ್ಜಾದ ವೃತ್ತಿಪರರ ತೀವ್ರ ಕೊರತೆ ಎದುರಿಸುತ್ತಿದೆ. ಅದನ್ನು ಟೆನ್ವಿಕ್​&ಮಾಹೆ ಕಾರ್ಯಕ್ರಮಗಳು ನೀಗಿಸಲಿವೆ ಎಂದು ಭಾರತದ ಮಾಜಿ ಕ್ರಿಕೆಟರ್​ ಹಾಗೂ ಟೆನ್ವಿಕ್​ ಸ್ಪೋರ್ಟ್ಸ್​ನ ಸಹ-ಸಂಸ್ಥಾಪಕ ಅನಿಲ್​ ಕುಂಬ್ಳೆ ಅನಿಸಿಕೆ ವ್ಯಕ್ತಪಡಿಸಿದರು.
ಮಣಿಪಾಲದಲ್ಲಿ ಮಾಹೆ ವಿವಿಯು ಟೆನ್ವಿಕ್​ ಸ್ಪೋರ್ಟ್ಸ್​ ಸಹಯೋಗದೊಂದಿಗೆ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಕ್ರಮ ಮತ್ತು ಹೈ-ಪರ್ಫಾರ್ಮೆನ್ಸ್​ ಸೆಂಟರ್​ಗಳ ಮೊದಲ ಹಂತದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕ್ರೀಡಾ ಸಂಸ್ಕೃತಿಗೆ ಕೊಡುಗೆ

ಮಾಹೆ ಸಹ ಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​ ಮಾತನಾಡಿ, ಟೆನ್ವಿಕ್​ ಜತೆಗಿನ ಈ ಸಹಯೋಗವು ಉನ್ನತ ಶಿಕ್ಷಣದಲ್ಲಿ ನಾವೀನ್ಯತೆ ಮತ್ತು ಶ್ರೇಷ್ಠತೆ ಒದಗಿಸಲಿದೆ. ಮೈದಾನದಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ ಕ್ರೀಡಾ ವ್ಯವಸ್ಥೆಯಲ್ಲಿ ಮುಂದಿನ ಪೀಳಿಗೆಯ ವೃತ್ತಿಪರರನ್ನು ಸಜ್ಜುಗೊಳಿಸಲಾಗುವುದು. ತನ್ಮೂಲಕ ಸದೃಢ ರಾಷ್ಟ್ರ ಮತ್ತು ಬಲಿಷ್ಠ ಕ್ರೀಡಾ ಸಂಸ್ಕೃತಿ ನಿಮಾರ್ಣಕ್ಕೆ ಕೊಡುಗೆ ನೀಡಲಿದ್ದೇವೆ ಎಂದರು.

ಮಣಿಪಾಲ, ಬೆಂಗಳೂರಿನಲ್ಲಿ ಸೆಂಟರ್​

ಮಾಹೆಯ ಕುಲಪತಿ ಲೆ.ಜ. (ಡಾ.) ಎಂ.ಡಿ. ವೆಂಕಟೇಶ್​ ಮಾತನಾಡಿ, ಹೈ-ಪರ್ಫಾರ್ಮೆನ್ಸ್​ ಸೆಂಟರ್​ ಕ್ರೀಡಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಮಾಹೆ ಮತ್ತು ಟೆನ್ವಿಕ್​ ಸ್ಪೋರ್ಟ್ಸ್​ ಸಂಸ್ಥೆಗಳು ಮಣಿಪಾಲ ಮತ್ತು ಬೆಂಗಳೂರಿನ ಮಾಹೆ ಕ್ಯಾಂಪಸ್​ಗಳಲ್ಲಿ ಸೆಂಟರ್​ ಸ್ಥಾಪಿಸಲಿವೆ. ಇಲ್ಲಿ ವಿಶ್ವ ದರ್ಜೆಯ ತರಬೇತಿ ನೀಡಲಾಗುವುದು. ಕ್ರೀಡಾ ಕ್ಷೇತ್ರದ ತಜ್ಞರಾದ ವಿನಯ್​ ಬದಾಮಿ, ಅಪರ್ಣಾ ಪೋಪಟ್​, ದೀಪ್ತಿ ಬೋಪಯ್ಯ, ಹೇಮಂತ್​ ಬುಚ್​, ಸಿದ್ಧಾರ್ಥ್​ ರಾಮನ್​ ಮತ್ತು ಸಿಕೆಎಂ ಧನಂಜಯ್​ ಅವರು ಅತಿಥಿ ಉಪನ್ಯಾಸಕರಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಅಂತಾರಾಷ್ಟ್ರೀಯ ಮಟ್ಟದ ತರಬೇತಿ

ಈ ಸಹಯೋಗದ ಭಾಗವಾಗಿ ಮಾಹೆ ಮತ್ತು ಟೆನ್ವಿಕ್​ ಸ್ಪೋರ್ಟ್ಸ್​ ವಿಶೇಷ ಕೋರ್ಸ್​ ಆರಂಭಿಸುತ್ತಿದೆ. ಕ್ರೀಡಾ ವ್ಯವಹಾರ, ದತ್ತಾಂಶ ಸಂಗ್ರಹಣೆ ಮತ್ತು ವಿಶ್ಲೇಷಣೆ, ಕ್ರೀಡೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ಮಷಿನ್​ ಲರ್ನಿಂಗ್​ ಕೋರ್ಸ್​ಗಳು ಮಾಹೆ ಪ್ಲಸ್​ ಪೋರ್ಟಲ್​ನಲ್ಲಿ ಲಭ್ಯವಿರಲಿದೆ. ಆನ್​ಲೈನ್​, ನೇರ ತರಗತಿ ಹಾಗೂ ಎರಡನ್ನೂ ಒಳಗೊಂಡ ಅಲ್ಪಾವಧಿ ಕೋರ್ಸ್​ ಮತ್ತು ಸರ್ಟಿಫಿಕೆಟ್​ ಕೋರ್ಸ್​ಗಳೂ ಇರಲಿವೆ. ದೇಶದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಮಟ್ಟದ ತರಬೇತಿ ನೀಡುವ ಜತೆಗೆ ಅವರ ಶೈಕ್ಷಣಿಕ ಭವಿಷ್ಯ ಭದ್ರಪಡಿಸಲಿದೆ. ಕ್ರೀಡಾಪಟುಗಳಿಗೆ  ಸ್ಪರ್ಧಾತ್ಮಕ ಕ್ರೀಡಾ ಜೀವನದ ಆಚೆಗೂ ತಮ್ಮ ಬದುಕು ರೂಪಿಸಿಕೊಳ್ಳಲು ಅವಕಾಶ ಒದಗಿಸಲಿದೆ ಎಂದು ಮಾಹೆ ಸಹಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್​ ಕೆ. ರಾವ್​ ತಿಳಿಸಿದ್ದಾರೆ.
"

ಭಾರತದ ಕ್ರೀಡಾ ಕ್ಷೇತ್ರದಲ್ಲಿ ಉದ್ಯೋಗಾರ್ಹ ವೃತ್ತಿಪರರ ತೀವ್ರ ಕೊರತೆಯಿದೆ. ಅದನ್ನು ನೀಗಿಸಲು ಮಾಹೆ ಮತ್ತು ಟೆನ್ವಿಕ್​ ಜಂಟಿಯಾಗಿ ಈ ವಿಶೇಷ ಶೈಕ್ಷಣಿಕ ಪಥ ರೂಪಿಸಿದೆ. 2010ರಲ್ಲಿ ನಾವು ಕಂಡಿದ್ದ ಕನಸಿನಂತೆ ಕ್ರೀಡಾ ಶಿಕ್ಷಣದ ಮೂಲಕ ಕ್ರಾಂತಿಕಾರಿ ಬದಲಾವಣೆ ಮೂಲಕ ಭಾರತವನ್ನು ಜಾಗತಿಕ ಕ್ರೀಡಾ ಶಕ್ತಿಯನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.