ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಕೊಂಕಣ ಪ್ರದೇಶ ಹಾಗೂ ಕರಾವಳಿ ಕರ್ನಾಟಕದ ಅಭಿವ್ಯದ್ಧಿಗೆ ನೀಡುತ್ತಿದೆ. ಇತ್ತೀಚೆಗೆ 10 ರೈಲ್ವೇ ಮೇಲ್ಸೇತುವೆ ಹಾಗೂ ಎರಡು ಸುರಂಗಗಳ ನಿಮಾರ್ಣ ಕಾರ್ಯ ಆರಂಭಿಸಲಾಗಿದೆ. ಕೊಂಕಣ ರೈಲ್ವೇ ಎಲ್ಲ ಹಳಿಗಳನ್ನು ಡಬ್ಲಿಂಗ್ ಮಾಡುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ರೈಲ್ವೇ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
ಶುಕ್ರವಾರ ಅಜ್ಜರಕಾಡಿನಲ್ಲಿ ಸ್ಥಾಪಿಸಲಾದ ಪ್ರಸಾರ ಭಾರತಿ ನೂತನ ಎಫ್ಎಂ ಟ್ರಾನ್ಸ್ಮಿಶನ್ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ಪ್ರಮುಖ ರೈಲು ನಿಲ್ದಾಣವಾಗಿರುವ ಇಂದ್ರಾಳಿ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹೊಸ ಪ್ಲಾಟ್ಫಾಮ್ರ್ ನಿಮಾರ್ಣದಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆಯೇ ಎಂಬುದರ ಕುರಿತು ಪರಿಶೀಲಿಸುವಂತೆ ಅಧಿಕಾರಿಗಳ ತಂಡಕ್ಕೆ ಸೂಚಿಸಲಾಗಿದೆ. ಸ್ಥಳಿಯ ವಾಸ್ತುಶಿಲ್ಪಕ್ಕೆ ಆದ್ಯತೆ ನೀಡಿ ಪ್ರಯಾಣಿಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
ನೂತನ ಎಫ್ಎಂ ಟ್ರಾನ್ಸ್ಮಿಫಿನ್ ಕೇಂದ್ರದಿಂದ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮಗಳು ಉಡುಪಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೂ ತಲುಪಲಿವೆ. ಅಲ್ಲದೆ, ಪ್ರಾಕೃತಿಕ ವಿಕೋಪದಂತಹ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಮಾಹಿತಿ ತಲುಪಿಸುವ ಸಂವಹನ ವ್ಯವಸ್ಥೆಯಾಗಿಯೂ ಈ ಕೇಂದ್ರ ಮಹತ್ವದ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ, ಕುಂದಾಪುರ ಶಾಸಕ ಕಿರಣ್ ಕೊಡಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳಿ ಉಪಸ್ಥಿತರಿದ್ದರು.
ಶ್ರೀಕೃಷ್ಣ ರೈಲ್ವೇ ನಿಲ್ದಾಣ ನಾಮಕರಣಕ್ಕೆ ಮನವಿ ಬೆಂಗಳೂರು ಮಡಗಾಂವ್ ವಂದೇ ಭಾರತ್ ರೈಲು ಸೇವೆ ಮೂಲಕ ರಾಜ್ಯ ರಾಜಧಾನಿ ಬೆಂಗಳೂರು ಕರಾವಳಿ ಭಾಗದ ಸಂಪರ್ಕಕ್ಕೆ ನರೇಂದ್ರ ಮೋದಿ ಸರ್ಕಾರ ಹೊಸ ಕೊಡುಗೆ ನೀಡಿದೆ. ಉಡುಪಿ ಇಂದ್ರಾಳಿ ರೈಲ್ವೇ ನಿಲ್ದಾಣಕ್ಕೆ ಉಡುಪಿ ಶ್ರೀಕೃಷ್ಣ ರೈಲ್ವೇ ನಿಲ್ದಾಣ ಎಂದು ನಾಮಕರಣ ಮಾಡಲು ಉಡುಪಿ ಜನತೆಯ ಪರವಾಗಿ ರೈಲ್ವೇ ಸಚಿವರಾದ ಅಶ್ವಿನ್ ವೈಷ್ಣವ್ ಅವರಿಗೆ ಶಾಸಕ ಯಶ್ಪಾಲ್ ಸುವರ್ಣ ಮನವಿ ಮಾಡಿದರು.