ಉಡುಪಿ: ಸುವ್ಯವಸ್ಥಿತ ರಸ್ತೆ ಸಂಪರ್ಕ ಜನ ಜೀವನಕ್ಕೆ ಅನುಕೂಲ. ಜೊತೆಗೆ ಗ್ರಾಮದ ಅಭಿವೃದ್ಧಿಗೆ ವೇಗ ನೀಡಲಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವುದಾಗಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಚಾಂತಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರೂರು ಪ್ರಧಾನ ನಗರದಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಿಮಾರ್ಣಗೊಂಡ ಕಾಂಕ್ರೀಟ್ ರಸ್ತೆ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಮುಖಂಡ ಬೈಕಾಡಿ ಸುಪ್ರಸಾದ್ ಶೆಟ್ಟಿ ಮಾತನಾಡಿ, ಹೇರೂರು ಪ್ರಧಾನ ನಗರ ಜನತೆಯ ಬಹು ವರ್ಷಗಳ ಬೇಡಿಕೆಗೆ ಶಾಸಕರು ಸ್ಪಂದಿಸಿ 50 ಲಕ್ಷ ವೆಚ್ಚದಲ್ಲಿ ರಸ್ತೆ ನಿಮಾರ್ಣ ಮಾಡಿರುವುದು ಅಭಿನಂದನಾರ್ಹ ಎಂದರು.
ಈ ಸಂದರ್ಭದಲ್ಲಿ ಉಡುಪಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜೀವ್ ಕುಲಾಲ್, ಪ್ರಧಾನ ಕಾರ್ಯದರ್ಶಿ ಮನೋಜ್ ಶೆಟ್ಟಿ , ಪಕ್ಷದ ಪ್ರಮುಖರಾದ ವೀಣಾ ನಾಯ್ಕ್, ಮೀರಾ ಸದಾನಂದ, ಹೇಮಾ ಅಶೋಕ್, ಶೈಲಜಾ, ರವಿ ಬೈಕಾಡಿ, ದಿನೇಶ್ ಶೆಟ್ಟಿ ಕೆಂಜೂರು, ಸಂತೋಷ್ ಜತ್ತನ್, ಗಿರೀಶ್ ಅಡಿಗ, ನಿತ್ಯಾನಂದ ನಾಯ್ಕ್, ದಿನೇಶ್ ಶೆಟ್ಟಿ ಹೇರೂರು, ಸುಶಾಂತ್ ಎಸ್. ಪೂಜಾರಿ ಉಪಸ್ಥಿತರಿದ್ದರು.